ಭಾರತದಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ಆಕ್ರಮಣಗಳು: ಬ್ರಿಟನ್ ಸರಕಾರಕ್ಕೆ ಪತ್ರ ಬರೆದ ಲೇಬರ್ ಪಕ್ಷದ ಸಂಸದ

Update: 2019-07-15 15:43 GMT

ಲಂಡನ್, ಜು. 15: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಆಕ್ರಮಣಗಳಿಗಾಗಿ ಬ್ರಿಟನ್‌ನ ಪ್ರತಿಪಕ್ಷ ಲೇಬರ್ ಪಾರ್ಟಿಯ ನಾಯಕ ಜೊನಾಥನ್ ಆ್ಯಶ್ವರ್ತ್ ಭಾರತ ಸರಕಾರವನ್ನು ಟೀಕಿಸಿದ್ದಾರೆ ಹಾಗೂ ಈ ‘ಅತ್ಯಂತ ಚಿಂತಾಜನಕ ಪರಿಸ್ಥಿತಿ’ಗೆ ಪ್ರತಿಕ್ರಿಯಿಸುವಂತೆ ಬ್ರಿಟನ್ ಸರಕಾರಕ್ಕೆ ಕರೆ ನೀಡಿದ್ದಾರೆ ಎಂದು ಪಿಟಿಐ ರವಿವಾರ ವರದಿ ಮಾಡಿದೆ.

ಲೀಸೆಸ್ಟರ್ ಸೌತ್ ಕ್ಷೇತ್ರವನ್ನು ಪ್ರತಿನಿಧಿಸುವ ಲೇಬರ್ ಪಾರ್ಟಿ ಸಂಸದ ಜೊನಾಥನ್, ಈ ವಿಷಯದಲ್ಲಿ ಬ್ರಿಟನ್ ವಿದೇಶ ಸಚಿವ ಜೆರೆಮಿ ಹಂಟ್‌ಗೆ ಕಳೆದ ವಾರ ಪತ್ರವೊಂದನ್ನು ಬರೆದಿದ್ದಾರೆ. ಮುಸ್ಲಿಮರ ವಿರುದ್ಧದ ಹಿಂಸಾಚಾರವನ್ನು ನಿಲ್ಲಿಸಲು ಭಾರತ ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘‘ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ನನ್ನ ಕ್ಷೇತ್ರದಲ್ಲಿರುವ ಮುಸ್ಲಿಮ್ ಸಮುದಾಯದ ಸದಸ್ಯರು ನನ್ನನ್ನು ಸಂಪರ್ಕಿಸಿದ್ದಾರೆ’’ ಎಂದು ಅವರು ಬರೆದಿದ್ದಾರೆ.

‘‘ಭಾರತದಲ್ಲಿ ನೆಲೆಸಿರುವ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಧರ್ಮದ ಆಧಾರದಲ್ಲಿ ಜನರನ್ನು ಕೊಲ್ಲುವ, ದಾಳಿಗಳನ್ನು ನಡೆಸುವ, ಗಲಭೆಗಳನ್ನು ಹುಟ್ಟುಹಾಕುವ, ತಾರತಮ್ಯ ಮತ್ತು ಗೂಂಡಾಗಿರಿ ನಡೆಸುವ ವರದಿಗಳು ಬಂದಿವೆ. ಇದು ಜನರ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

ಮಾನವಹಕ್ಕುಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ಬ್ರಿಟನ್ ಭಾರತದೊಂದಿಗೆ ಈಗಾಗಲೇ ವ್ಯವಹರಿಸಿದೆ ಎಂಬುದಾಗಿ ಬ್ರಿಟನ್ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ. ಧರ್ಮದ ಆಧಾರದಲ್ಲಿ ನಡೆಯುವ ಯಾವುದೇ ರೀತಿಯ ತಾರತಮ್ಯವನ್ನು ಧರ್ಮ ಮತ್ತು ದೇಶವನ್ನು ಪರಿಗಣಿಸದೆ ಖಂಡಿಸಿರುವುದಾಗಿಯೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News