ಅರ್ಹ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಕಲ್ಪಿಸಲು ಸೂಚನೆ

Update: 2019-07-15 15:50 GMT

ಬೆಂಗಳೂರು, ಜು. 15: ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಅರ್ಹ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ದೃಷ್ಟಿಯಿಂದ ಹಾಸ್ಟೆಲ್‌ಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಮೆರಿಟ್ ಆಧಾರದ ಮೇಲೆ ತುಂಬಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಸುತ್ತೋಲೆ ಹೊರಡಿಸಿ, 2019-20ನೆ ಸಾಲಿನಲ್ಲಿ ವಿದ್ಯಾರ್ಥಿ ನಿಲಯಗಳ ಪ್ರವೇಶಾವಕಾಶ ಕೋರಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯಗಳಿಗೆ ದಾಖಲು ಮಾಡಲು ಕ್ರಮ ಕೈಗೊಳ್ಳುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಕರ್ತವ್ಯ.

ವಿದ್ಯಾರ್ಥಿ ನಿಲಯಗಳ ಮಂಜೂರಾತಿ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ನೂತನ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಪರಿಶೀಲಿಸಲು ಸೂಚಿಸಲಾಗಿದೆ. ಈ ಹಿಂದೆ ಕೆಲವು ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿಗಿಂತಲೂ ಹೆಚ್ಚಿನ ಪ್ರವೇಶಾವಕಾಶ ಕಲ್ಪಿಸುತ್ತಿದ್ದುದರಿಂದ ಆಗುತ್ತಿದ್ದ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಮಂಜೂರಾತಿ ಸಂಖ್ಯೆಗಿಂತ ಹೆಚ್ಚು ಪ್ರವೇಶಾವಕಾಶವನ್ನು ನಿರ್ಬಂಧಿಸಲಾಗಿತ್ತು.

ಹಾಸ್ಟೆಲ್ ಪ್ರವೇಶ ಈಗ ಆನ್‌ಲೈನ್ ಮೂಲಕ ನಡೆಯುತ್ತಿದ್ದು, 2019-20ನೆ ಸಾಲಿನಲ್ಲಿ 18 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸ್ವೀಕೃತಗೊಂಡಿವೆ. ಇಲಾಖೆ ಒಟ್ಟು 636 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ನಿರ್ವಹಿಸುತ್ತಿದ್ದು, 121 ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿಗಿಂತ ಕಡಿಮೆ ದಾಖಲಾತಿ ಇದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News