ವಿಶ್ವಬ್ಯಾಂಕ್‌ ನಿಂದ ಪಾಕಿಸ್ತಾನಕ್ಕೆ ಅಗಾಧ ಮೊತ್ತದ ದಂಡ

Update: 2019-07-15 15:51 GMT

ಇಸ್ಲಾಮಾಬಾದ್,ಜು. 15: 2011ರಲ್ಲಿ ಕಂಪೆನಿಯೊಂದಕ್ಕೆ ಗಣಿಗಾರಿಕೆ ಪರವಾನಿಗೆಯನ್ನು ಕಾನೂನುಬಾಹಿರವಾಗಿ ನಿರಾಕರಿಸಿರುವುದಕ್ಕಾಗಿ ಅಂತರ್‌ರಾಷ್ಟ್ರೀಯ ಪಂಚಾಯತಿ ನ್ಯಾಯಾಲಯವೊಂದು ಪಾಕಿಸ್ತಾನಕ್ಕೆ 5.976 ಬಿಲಿಯ ಡಾಲರ್ (ಸುಮಾರು 40,943 ಕೋಟಿ ಭಾರತೀಯ ರೂಪಾಯಿ) ದಂಡ ವಿಧಿಸಿದೆ.

ಇದು ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಬೃಹತ್ ಪ್ರಮಾಣದ ದಂಡವಾಗಿದೆ. ಚಿಲಿಯ ಗಣಿ ಕಂಪೆನಿ ಆಂಟೊಫಗಸ್ಟ ಮತ್ತು ಕೆನಡದ ಬ್ಯಾರಿಕ್ ಗೋಲ್ಡ್ ಕಾರ್ಪೊರೇಶನ್‌ಗಳು ಜಂಟಿಯಾಗಿ ಸ್ಥಾಪಿಸಿರುವ ಟೆತ್ಯಾನ್ ಕಾಪರ್ ಕಂಪೆನಿ (ಟಿಸಿಸಿ)ಯು ತನ್ನ ರೆಕೊ ಡಿಕ್ ಯೋಜನೆಗಾಗಿ ಸಲಿಸಿದ್ದ ಲೀಸಿಂಗ್ ಕೋರಿಕೆಯನ್ನು ಬಲೂಚಿಸ್ತಾನ ಸರಕಾರ ತಿರಸ್ಕರಿಸಿತ್ತು. ಇದನ್ನು ಕಂಪೆನಿಯು ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ಹೂಡಿಕೆ ವಿವಾದಗಳ ಇತ್ಯರ್ಥ ಕೇಂದ್ರದಲ್ಲಿ 2012ರಲ್ಲಿ ಪ್ರಶ್ನಿಸಿತ್ತು.

ನ್ಯಾಯಮಂಡಳಿಯು ಶುಕ್ರವಾರ ತನ್ನ 700 ಪುಟಗಳ ತೀರ್ಪಿನಲ್ಲಿ, ಗಣಿ ಕಂಪೆನಿಗೆ 4.08 ಬಿಲಿಯ ಡಾಲರ್ (ಸುಮಾರು 27,953 ಕೋಟಿ ರೂಪಾಯಿ) ದಂಡ ಮತ್ತು 1.87 ಬಿಲಿಯ ಡಾಲರ್ (ಸುಮಾರು 12,810 ಕೋಟಿ ರೂಪಾಯಿ) ಬಡ್ಡಿ ನೀಡುವಂತೆ ಪಾಕಿಸ್ತಾನಕ್ಕೆ ಆದೇಶ ನೀಡಿದೆ ಎಂದು ‘ಡಾನ್’ ವರದಿ ಮಾಡಿದೆ. ಕಂಪೆನಿಯು 11.43 ಬಿಲಿಯ ಡಾಲರ್ (ಸುಮಾರು 78,300 ಕೋಟಿ ರೂಪಾಯಿ) ಪರಿಹಾರ ಕೋರಿತ್ತು.

ರೆಕೊ ಡಿಕ್ ಎಂಬಲ್ಲಿ ಗಣಿ ನಿರ್ಮಿಸುವುದಕ್ಕಾಗಿ ಟಿಸಿಸಿಯು 2010ರ ಆಗಸ್ಟ್‌ನಲ್ಲಿ ವಿಸ್ತೃತ ಅಧ್ಯಯನ ನಡೆಸಿತ್ತು ಹಾಗೂ 2011 ಫೆಬ್ರವರಿಯಲ್ಲಿ ಗಣಿ ಲೀಸ್‌ಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಬಲೂಚಿಸ್ತಾನ ಸರಕಾರವು ಈ ಪ್ರಸ್ತಾವವನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ಆಗ ಯೋಜನೆಯು ಸ್ಥಗಿತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News