ಪ್ರತಿಭಟನೆ ನಡೆಸಿದವರು ಗಲಭೆಕೋರರು: ಹಾಂಕಾಂಗ್ ನಾಯಕಿ

Update: 2019-07-15 15:57 GMT

ಹಾಂಕಾಂಗ್,ಜು. 15: ಹಾಂಕಾಂಗ್‌ನ ಶಾಪಿಂಗ್ ಮಾಲೊಂದರಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಪ್ರತಿಭಟನಕಾರರು ‘ಗಲಭೆಕೋರರು’ ಎಂಬುದಾಗಿ ಹಾಂಕಾಂಗ್‌ ನ ಚೀನಾ ಪರ ನಾಯಕಿ ಕ್ಯಾರಿ ಲ್ಯಾಮ್ ಸೋಮವಾರ ಬಣ್ಣಿಸಿದ್ದಾರೆ.

ರವಿವಾರ ನಡೆದ ಘರ್ಷಣೆಯ ಬಳಿಕ, ನಗರದ ಕಳೆಗುಂದಿದ ಪೊಲೀಸ್ ಪಡೆಗೆ ಚೈತನ್ಯ ತುಂಬುವ ಭಾಗವಾಗಿ ನಗರ ಮುಖ್ಯಾಧಿಕಾರಿ ಲ್ಯಾಮ್ ಈ ಹೇಳಿಕೆ ನೀಡಿದ್ದಾರೆ. ಪ್ರತಿಭಟನೆಯ ವೇಳೆ ಪೊಲೀಸರು ಸಣ್ಣ ಗುಂಪಿನ ಪ್ರತಿಭಟನಕಾರರ ಮೇಲೆ ಮೆಣಸಿನ ಪುಡಿ ಎರಚಿದರು ಹಾಗೂ ಲಾಠಿ ಬೀಸಿದರು. ಇದಕ್ಕೆ ಪ್ರತಿಯಾಗಿ ಪ್ರತಿಭಟನಕಾರರು ಪೊಲೀಸರತ್ತ ಕೊಡೆಗಳು, ಬಾಟಲಿಗಳು ಮತ್ತು ಇತರ ವಸ್ತುಗಳನ್ನು ಎಸೆದರು. ಈ ಪ್ರತಿಭಟನೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರು ಇಬ್ಬರೂ ಗಾಯಗೊಂಡಿದ್ದಾರೆ. ಕನಿಷ್ಠ 28 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘‘ಅವರು (ಪೊಲೀಸರು) ತಮ್ಮ ಕರ್ತವ್ಯ ಮಾಡುತ್ತಿದ್ದರು. ಅವರು ಅತ್ಯಂತ ವೃತ್ತಿಪರರು ಮತ್ತು ಸಂಯಮ ವಹಿಸಿದ್ದರು. ಆದರೆ, ಗಲಭೆಕೋರರು ಅವರ ಮೇಲೆ ದಾಳಿ ನಡೆಸಿದರು. ಪ್ರತಿಭಟನಕಾರರನ್ನು ನಿಜವಾಗಿಯೂ ಗಲಭೆಕೋರರು ಎಂಬುದಾಗಿ ನಾವು ಕರೆಯಬಹುದಾಗಿದೆ’’ ಎಂದು ಹಾಂಕಾಂಗ್ ಮುಖ್ಯಾಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News