ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲೂ ಇ-ತ್ಯಾಜ್ಯ ಸಂಗ್ರಹ ಬಿನ್: ಮೇಯರ್ ಗಂಗಾಂಬಿಕೆ

Update: 2019-07-15 16:00 GMT

ಬೆಂಗಳೂರು, ಜು.15: ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್‌ಗಳಲ್ಲೂ ಇ-ತ್ಯಾಜ್ಯ ಸಂಗ್ರಹ ಬಿನ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಹಾಗೂ ಬಿ-ರೆಸ್ಪಾನ್ಸಿಬಲ್ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ, ಇಂದಿನಿಂದ ಆ.15ರವರೆಗೆ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರಂಭದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಎಲ್ಲ ಎಂಟು ವಲಯಗಳಲ್ಲಿ ಇ-ತ್ಯಾಜ್ಯ ಬಿನ್‌ಗಳನ್ನು ಅಳವಡಿಸಲಾಗುತ್ತದೆ. ಬಳಿಕ ಹಂತ ಹಂತವಾಗಿ ಎಲ್ಲ ವಾರ್ಡ್‌ಗಳಲ್ಲೂ ಅಳವಡಿಸಲಾಗುವುದು. ಜೊತೆಗೆ, ಈ ಅಭಿಯಾನದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಳ್ಳುತ್ತಾರೆ ಎಂದರು. ಬಳಕೆಯಾಗದ ಇ-ತ್ಯಾಜ್ಯವನ್ನು ಮನೆಗಳಲ್ಲಿ, ಕಚೇರಿಗಳಲ್ಲಿ ಇಟ್ಟುಕೊಳ್ಳುವ ಬದಲು ಪಾಲಿಕೆಗೆ ನೀಡಿದರೆ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಅದಕ್ಕಾಗಿ ಒಂದು ತಿಂಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದ ಅವರು, ತಮ್ಮ ಮನೆಗಳಲ್ಲಿರುವ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಂದು ಹಾಕಬಹುದು ಎಂದು ತಿಳಿಸಿದರು.

ಉಪ ಮೇಯರ್ ಭದ್ರೇಗೌಡ ಮಾತನಾಡಿ, ಬಿಬಿಎಂಪಿ ಹಾಗೂ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಇ-ತ್ಯಾಜ್ಯ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗಿಯಾಗಿ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News