ಜು.20 ರಿಂದ ಪರಿಷ್ಕೃತ ದಂಡ: ಎಲ್ಲೆಡೆ ಜಾಗೃತಿ ಅಭಿಯಾನ ಜೋರು

Update: 2019-07-15 16:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.15: ಕರ್ನಾಟಕ ಮೊಟಾರು ವಾಹನ ಕಾಯ್ದೆ ತಿದ್ದುಪಡಿಗೊಳಿಸಿ ಪರಿಷ್ಕೃತ ಆದೇಶ ಜಾರಿಗೊಳಿಸಲಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಜು.20 ರಿಂದ ಈ ನಿಯಮ ಜಾರಿಗೆ ಬರಲಿದೆ. ಈ ಹಿನ್ನೆಲೆ ನಗರದೆಲ್ಲೆಡೆ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ.

ಸಂಚಾರ ಪೊಲೀಸರು, ನಗರದ ಪ್ರಮುಖ ರಸ್ತೆಗಳು ಹಾಗೂ ವಾಹನಗಳ ಅಧಿಕ ಸಂಚಾರವಿರುವ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಅವರಿಗೆ ತಿಳಿವಳಿಕೆ ಹೇಳಿ, ಸಂಚಾರ ನಿಯಮ ಪಾಲನೆ ಹಾಗೂ ಪರಿಷ್ಕೃತ ದಂಡದ ವಿವರಗಳಿರುವ ಕರಪತ್ರ ನೀಡಿ ಜಾಗೃತಿ ಅಭಿಯಾನದಲ್ಲಿ ನಿರತರಾಗಿದ್ದಾರೆ.

ಧ್ವನಿವರ್ಧಕ, ಸೂಚನಾ ಫಲಕ: ಈಗಾಗಲೇ ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣ, ಸಂಚಾರ ವಿಭಾಗದ ವೆಬ್‌ಸೈಟ್‌ಗಳಲ್ಲಿ ಪರಿಷ್ಕೃತ ದಂಡ ಜಾರಿ ಸಂಬಂಧ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ, ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆ ವೃತ್ತಗಳಲ್ಲಿ ಧ್ವನಿವರ್ಧಕ, ಸೂಚನಾ ಫಲಕ ಅಳವಡಿಸಿ ಜಾಗೃತಿಗೆ ಮುಂದಾಗಿದ್ದಾರೆ.

ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವುದು ನಮ್ಮ ಉದ್ದೆಶವಲ್ಲ. ಸಂಚಾರ ನಿಯಮ ಪಾಲಿಸುವ ವಾಹನ ಸವಾರರು ದಂಡ ತೆರಬೇಕಾಗಿಲ್ಲ. ಈ ಹಿಂದೆಯೆ ಈ ನಿಯಮ ಜಾರಿಗೆ ತರಬೇಕಿತ್ತು. ಆದರೆ, ಈ ವಿಚಾರ ಕೆಲವರ ಗಮನಕ್ಕೆ ಬಂದಿಲ್ಲ. ಆದ್ದರಿಂದ ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸಿದ ಬಳಿಕ ಪರಿಷ್ಕೃತ ದರ ಜಾರಿಗೆ ತರಲಾಗುವುದು. ಜು.20ರಿಂದ ನಗರದಲ್ಲಿ ಈ ನಿಯವು ಜಾರಿಗೆ ಬರಲಿದೆ ಎನ್ನುತ್ತಾರೆ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್.

ದಂಡ ಎಷ್ಟು?

ಪರಿಷ್ಕತ ದಂಡ ಅನ್ವಯ ಮಿತಿ ಮೀರಿದ ವೇಗದ ಚಾಲನೆಗೆ 500 ರೂ.ನಿಂದ 1 ಸಾವಿರ ರೂ., ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ 1 ಸಾವಿರ ರೂ. ದಂಡ, ಚಾಲನೆ ವೇಳೆ 2ನೆ ಬಾರಿ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ 2 ಸಾವಿರ ರೂ. ದಂಡ, ನೋಂದಣಿ ಮಾಡಿಸದೆ ವಾಹನ ಚಲಾಯಿಸಿದರೆ ಮೊದಲ ಉಲ್ಲಂಘನೆಗೆ 5 ಸಾವಿರ ರೂ. ದಂಡ. 2ನೆ ಉಲ್ಲಂಘನೆಗೆ 10 ಸಾವಿರ ರೂ. ದಂಡ, ವಾಹನ ವಿಮೆ ಹೊಂದದೆ ಚಾಲನೆ ಮಾಡಿದರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News