ಪ್ಲಾಸ್ಟಿಕ್ ಬಳಕೆ ನಿಷೇಧ: ಮಾರುಕಟ್ಟೆ ತಪಾಸಣೆ ನಡೆಸಿದ ಬಿಬಿಎಂಪಿ ಮೇಯರ್

Update: 2019-07-15 16:18 GMT

ಬೆಂಗಳೂರು, ಜು.15: ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿರುವ ಬಗ್ಗೆ ಅಂಗಡಿ ಮಾಲಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮೇಯರ್ ನೇತೃತ್ವದಲ್ಲಿ ನಗರದ ಪ್ರಮುಖ ಮಾರುಕಟ್ಟೆ ಹಾಗೂ ಕಾಂಪ್ಲೆಕ್ಸ್‌ಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಯಿತು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಿಂದ ಪ್ರತ್ಯೇಕ ತಂಡಗಳ ಮೂಲಕ ಅನಿರೀಕ್ಷಿತ ತಪಾಸಣೆ ಕೈಗೊಂಡು ಯಶವಂತಪುರ ಎಪಿಎಂಸಿ ಯಾರ್ಡ್, ಜಯನಗರ ಮಾರುಕಟ್ಟೆ, ಶಿವಾಜಿನಗರದ ರಸೆಲ್ ಮಾರುಕಟ್ಟೆ, ಶಾಂತಿನಗರದ ಜಾನ್ಸನ್ ಮಾರುಕಟ್ಟೆ ಮತ್ತು ಆಸ್ಟಿನ್ ಟೌನ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್, ವಿಜಯನಗರ ಮಾರುಕಟ್ಟೆ ಹಾಗೂ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಪರಿಶೀಲನೆ ಮಾಡಲಾಯಿತು.

ಮೇಯರ್ ನೇತೃತ್ವದಲ್ಲಿ ತಂಡವು ಮೊದಲಿಗೆ ಯಶವಂತಪುರ ಎಪಿಎಂಸಿ ಯಾರ್ಡ್‌ಗೆ ಭೇಟಿ ನೀಡಿ ಸಗಟು ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಗಜಾನನ ಪ್ರಾವಿಜನ್ ಸ್ಟೋರ್, ಬೃಂದಾವನಾ ಟ್ರೇಡರ್ಸ್, ರಾಘವೇಂದ್ರ ಪ್ಲಾಸ್ಟಿಕ್, ವರಲಕ್ಷ್ಮೀ ಟ್ರೇಡರ್ಸ್ ಸೇರಿದಂತೆ ಒಟ್ಟು ನಲವತ್ತು ಮಳಿಗೆಗಳ ಮೇಲೆ ದಾಳಿ ನಡೆಸಿ 150 ಕೆ.ಜಿ. ಪ್ಲಾಸ್ಟಿಕ್ ಜಪ್ತಿ ಮಾಡಲಾಯಿತು.

ಮೇಯರ್ ಗಂಗಾಂಬಿಕೆ ಮಾತನಾಡಿ, ಪಾಲಿಕೆ ಆರೋಗ್ಯಾಧಿಕಾರಿಗಳು ಇದೇ ರೀತಿ ಒಂದು ವಾರಗಳ ಕಾಲ ಎಲ್ಲ 198 ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಜತೆಗೆ ಪ್ಲಾಸ್ಟಿಕ್‌ನ್ನು ಜಪ್ತಿ ಮಾಡಲಿದ್ದಾರೆ. ಒಂದು ವಾರದ ಬಳಿಕವೂ ಪ್ಲಾಸ್ಟಿಕ್ ಬಳಕೆ ಮಾಡಿದರೆ ಪ್ಲಾಸ್ಟಿಕ್ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸಲಾಗುವುದು. ಆದರೂ ಪ್ಲಾಸ್ಟಿಕ್ ಬಳಕೆ ಮುಂದುವರಿದಲ್ಲಿ ಮಳಿಗೆಗಳ ಪರವಾನಗಿ ರದ್ದುಗೊಳಿಸಿ ಬೀಗಮುದ್ರೆ ಜಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ವಿತರಕರು, ಪ್ಯಾಕರ್ಸ್ ಹಾಗೂ ಸಗಟು ವ್ಯಾಪಾರಿಗಳ ಜೊತೆ ಜು.19ರಂದು ಪುರಭವನದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News