ನೀವು ಬಂದ ದೇಶಕ್ಕೆ ಹಿಂದಿರುಗಿ; ಅದನ್ನೇ ಸರಿ ಮಾಡಿ

Update: 2019-07-15 16:21 GMT

ವಾಶಿಂಗ್ಟನ್, ಜು. 15: “ನೀವು ಎಲ್ಲಿಂದ ಬಂದಿದ್ದೀರೋ ಅಲ್ಲಿಗೇ ಹೋಗಿ” ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಡೆಮಾಕ್ರಟಿಕ್ ಪಕ್ಷದ ಮಹಿಳಾ ಸಂಸದರಿಗೆ ಹೇಳಿದ್ದಾರೆ. ಆದರೆ, ಆ ಸಂಸದರು ಯಾರೆಂದು ಅವರು ಹೆಸರಿಸಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಪಕ್ಷದ ಹಿರಿಯ ಸದಸ್ಯರು, ಟ್ರಂಪ್ ಓರ್ವ ‘ಜನಾಂಗೀಯವಾದಿ’ ಹಾಗೂ ‘ವಿದೇಶಿಯರ ಬಗ್ಗೆ ಭೀತಿ ಹೊಂದಿರುವ ಮನುಷ್ಯ’ ಎಂಬುದಾಗಿ ಬಣ್ಣಿಸಿದ್ದಾರೆ. ಇದು ಅವರು ನೀಡಿರುವ ವಿವಾದಾಸ್ಪದ ಹೇಳಿಕೆಗಳ ಪಟ್ಟಿಯಲ್ಲಿ ಇತ್ತೀಚಿನದಾಗಿದೆ.

ಕಳೆದ ವರ್ಷ ಅವರು ಆಫ್ರಿಕದ ದೇಶಗಳನ್ನು ‘ಶಿಟ್‌ಹೋಲ್’ ದೇಶಗಳು ಎಂಬುದಾಗಿ ಕರೆದಿದ್ದರು.‘‘ ‘ಪ್ರಗತಿಪರ’ ಡೆಮಾಕ್ರಟಿಕ್ ಕಾಂಗ್ರೆಸ್ ಮಹಿಳೆಯರನ್ನು’’ ಉದ್ದೇಶಿಸಿ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಯುವ, ಪ್ರಗತಿಪರ ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಪ್ರಥಮ ಬಾರಿಯ ಸದಸ್ಯೆಯರನ್ನು ಗಮನದಲ್ಲಿಟ್ಟುಕೊಂಡು ಅವರು ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ, ಮಿನಸೋಟ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಮತ್ತು ಮಿಶಿಗನ್‌ನ ರಶೀದಾ ತ್ಲೈಬ್‌ರನ್ನು ಅವರು ಗುರಿಯಾಗಿಸಿರಬಹುದು ಎಂದು ಹೇಳಲಾಗಿದೆ. ತಾನು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ ಎನ್ನುವುದನ್ನು ಟ್ರಂಪ್ ಹೇಳಿಲ್ಲ. ಆದರೆ, ‘‘ಅವರು ಬಂದಿರುವ ದೇಶಗಳ ಸರಕಾರಗಳು ಪ್ರಪಂಚದಲ್ಲೇ ಸಂಪೂರ್ಣ ವಿಫಲವಾಗಿವೆ, ಅತ್ಯಂತ ಕೆಟ್ಟದಾಗಿವೆ, ಅತ್ಯಂತ ಭ್ರಷ್ಟವಾಗಿವೆ ಹಾಗೂ ಅಸಮರ್ಥವಾಗಿವೆ’’ ಎಂದು ಅವರು ಹೇಳಿದ್ದಾರೆ.

‘‘ನಮ್ಮ ಸರಕಾರ ಹೇಗೆ ನಡೆಯಬೇಕು ಎಂಬುದಾಗಿ ಅವರು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯಂತ ಶಕ್ತಿಶಾಲಿ ದೇಶವಾಗಿರುವ ಅಮೆರಿಕದ ಜನರಿಗೆ ಹೇಳುತ್ತಿದ್ದಾರೆ’’ ಎಂದು ಟ್ರಂಪ್ ಆರೋಪಿಸಿದ್ದಾರೆ. ‘‘ಅವರು ಯಾಕೆ ತಮ್ಮ ಸಂಪೂರ್ಣವಾಗಿ ಕುಸಿದಿರುವ ಹಾಗೂ ಅಪರಾಧ ಪ್ರಕರಣಗಳಿಂದ ತುಂಬಿ ಹೋಗಿರುವ ದೇಶಗಳಿಗೆ ಹಿಂದಿರುಗಿ ಅಲ್ಲಿಯ ವ್ಯವಸ್ಥೆಗಳನ್ನು ಸರಿಪಡಿಸಲು ಪ್ರಯತ್ನಿಸಬಾರದು?’’ ಎಂದು ಅವರು ಪ್ರಶ್ನಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಜನಿಸಿರುವ ಒಕಾಸಿಯೊ ಅವರ ಪೂರ್ವಜರು ಅಮೆರಿಕದ ಭೂಭಾಗವಾಗಿರುವ ಪೋರ್ಟರಿಕೊ ದೇಶದವರು. ಡೆಟ್ರಾಯಿಟ್‌ನಲ್ಲಿ ಜನಿಸಿರುವ ತ್ಲೈಬ್ ಫೆಲೆಸ್ತೀನ್ ಮೂಲದವರು. ಇಲ್ಹಾನ್ ಬಾಲ್ಯದಲ್ಲೇ ಯುದ್ಧಪೀಡಿತ ಸೊಮಾಲಿಯದಿಂದ ಅಮೆರಿಕ್ಕೆ ಬಂದವರು. ಅವರು ಅಮೆರಿಕದ ಕಾಂಗ್ರೆಸ್‌ನಲ್ಲಿರುವ ಪ್ರಥಮ ಕರಿಯ ಮುಸ್ಲಿಮ್ ಮಹಿಳೆ.

ಡೊನಾಲ್ಡ್ ಟ್ರಂಪ್ ಮಾಡಿರುವುದು ‘ಜನಾಂಗೀಯ ಟ್ವೀಟ್’ ಎಂಬುದಾಗಿ ಸಹಾಯಕ ಹೌಸ್ ಸ್ಪೀಕರ್ ಬೆನ್ ರೇ ಲುಜನ್ ‘ಫಾಕ್ಸ್ ನ್ಯೂಸ್ ಸಂಡೇ’ ಪತ್ರಿಕೆಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.‘‘ಅವರೆಲ್ಲರೂ ಅಮೆರಿಕದ ಮತದಾರರಿಂದ ಆಯ್ಕೆಯಾದ ಅಮೆರಿಕದ ಪ್ರಜೆಗಳು’’ ಎಂದಿದ್ದಾರೆ.‘‘ನಮ್ಮ ದೇಶವನ್ನು ವಿಭಜಿಸುವ ಉದ್ದೇಶದ ಡೊನಾಲ್ಡ್ ಟ್ರಂಪ್‌ರ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ’’ ಎಂದು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News