ಸಿಧುಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನಾನೇನೂ ಮಾಡುವಂತಿಲ್ಲ: ಅಮರೀಂದರ್ ಸಿಂಗ್

Update: 2019-07-15 16:22 GMT

ಹೊಸದಿಲ್ಲಿ, ಜು.15: ತನ್ನ ಕೆಲಸ ನಿರ್ವಹಿಸಲು ನವಜೋತ್ ಸಿಂಗ್ ಸಿಧುಗೆ ಇಷ್ಟವಿಲ್ಲ ಎಂದಾದರೆ ಆ ವಿಷಯದಲ್ಲಿ ನಾನೇನೂ ಮಾಡುವಂತಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.

 ಸರಕಾರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಿದ್ದರೆ ಸ್ವಲ್ಪ ಶಿಸ್ತು, ನಿಯಮಪಾಲನೆ ಅಗತ್ಯ. ಜನರಲ್ ಸೂಚಿಸಿದ ಕೆಲಸವನ್ನು ಯೋಧ ಮಾಡುವುದಿಲ್ಲ ಎಂದರೆ ಹೇಗೆ. ಭತ್ತದ ಬೆಳೆಯ ಅವಧಿಯ ಮಧ್ಯದಲ್ಲಿ ಪದತ್ಯಾಗ ಮಾಡುವ ಬದಲು ಸಚಿವರು ತನಗೆ ವಹಿಸಿಕೊಟ್ಟ ಕೆಲಸ ನಿರ್ವಹಿಸಬೇಕಿತ್ತು ಎಂದು ಅಮರೀಂದರ್ ಸಿಂಗ್ ಹೇಳಿದರು.

ಹೈಕಮಾಂಡ್‌ನೊಂದಿಗೆ ಚರ್ಚಿಸಿದ ಬಳಿಕ ಸಚಿವ ಸಂಪುಟ ರಚಿಸಲಾಗಿದೆ. ಆದ್ದರಿಂದ ಸಿದು ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಿದ್ದರಲ್ಲಿ ತಪ್ಪೇನೂ ಇಲ್ಲ. ಚಂಡೀಗಢದಲ್ಲಿರುವ ತನ್ನ ನಿವಾಸಕ್ಕೆ ಸಿಧು ರಾಜೀನಾಮೆ ಪತ್ರ ಕಳುಹಿಸಿರುವುದಾಗಿ ತನಗೆ ತಿಳಿದುಬಂದಿದೆ. ರಾಜೀನಾಮೆ ಪತ್ರವನ್ನು ಓದಿಲ್ಲದ ಕಾರಣ ಈ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದವರು ಹೇಳಿದರು.

ಆದರೆ ಸಿದು ಪತ್ನಿಗೆ ಲೋಕಸಭೆ ಚುನಾವಣೆಯ ಟಿಕೆಟ್ ಕೈತಪ್ಪಲು ತಾನು ಕಾರಣ ಎಂಬ ಸಿಧು ಆರೋಪವನ್ನು ಅವರು ನಿರಾಕರಿಸಿದರು. ರಾಹುಲ್ ಗಾಂಧಿ ಪಕ್ಷಾಧ್ಯಕ್ಷತೆಗೆ ರಾಜೀನಾಮೆ ನೀಡಿದ ಬಳಿಕ ಪಕ್ಷದ ಕಾರ್ಯಚಟುವಟಿಕೆ ಸ್ಥಗಿತಗೊಂಡಿದೆ ಎಂಬ ವಿಪಕ್ಷಗಳ ಹೇಳಿಕೆ ಸರಿಯಲ್ಲ. ರಾಹುಲ್ ಪಕ್ಷಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ ಎಂದ ಅಮರೀಂದರ್, ತಾನು ಶೀಘ್ರ ರಾಹುಲ್ ಗಾಂಧಿಯವರನ್ನು ಭೇಟಿಮಾಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News