ರಮ್ಯಾ ವಿರುದ್ಧ ಅಶ್ಲೀಲ ಪೋಸ್ಟ್: ಆರೋಪಿ ಪತ್ರಕರ್ತ ನವೀನ್ ಸಾಗರ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

Update: 2019-07-15 17:29 GMT
ನವೀನ್ ಸಾಗರ್‌

ಬೆಂಗಳೂರು, ಜು.15: ಮಾಜಿ ಸಂಸದೆ, ನಟಿ ರಮ್ಯಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಹಾಕಿದ್ದ ಆರೋಪಿ ಪತ್ರಕರ್ತ ನವೀನ್ ಸಾಗರ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಈ ಕುರಿತು ನಿರೀಕ್ಷಣಾ ಜಾಮೀನು ಕೋರಿ ನವೀನ್ ಸಾಗರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿ ನವೀನ್ ಸಾಗರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಅರ್ಜಿದಾರರ ಪರವಾಗಿ ವಕೀಲ ಅರುಣ್ ಶ್ಯಾಮ್ ಅವರು ವಾದಿಸಿದರು.

ಪತ್ರಕರ್ತ ನವೀನ್ ಸಾಗರ್ ಅವರು ರಮ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ನೆಪದಲ್ಲಿ ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಪೋಸ್ಟ್ ಹಾಕಿ ಅಶ್ಲೀಲ ಪದಗಳಿಂದ ನಿಂದನೆ ಮಾಡಲು ಪ್ರಚೋದನೆ ನೀಡಿದ್ದಾರೆ. ಮಹಿಳೆಯ ಚಿತ್ರವನ್ನು ವಿಕೃತವಾಗಿ ತೇಜೋವಧೆ ಮಾಡಲು ಸಾಮಾಜಿಕ ತಾಣವನ್ನು ಬಳಸಿಕೊಂಡು ಘನತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ, ಸಾಗರ್ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಎಚ್.ವಿ.ಭವ್ಯ ಅನು ಎಂಬುವವರು ಸಾಗರ್ ವಿರುದ್ಧ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಸೈಬರ್ ಕ್ರೈಂ ವಿಭಾಗದ ಪೊಲೀಸರು ನವೀನ್ ಸಾಗರ್ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 67(ಅಶ್ಲೀಲ ವಿಷಯ ಪ್ರಕಟಣೆ ಅಥವಾ ಪ್ರಸಾರ), ಐಪಿಸಿ ಸೆಕ್ಷನ್ 354-(ಮಹಿಳೆಯ ಗೌರವಕ್ಕೆ ಕುಂದು ತರುವಂತೆ ದೌರ್ಜನ್ಯ ಕೃತ್ಯ ನಡೆಸುವುದು) ಹಾಗೂ ಸೆಕ್ಷನ್ 354 ಈ(ಹಿಂಬಾಲಿಸುವಿಕೆ, ಮಹಿಳೆಯರನ್ನು ಅಂತರ್ಜಾಲ, ಇಮೇಲ್ ಮತ್ತಿತರೆ ಮಾಧ್ಯಮದ ಮೂಲಕ ಪದೇ ಪದೇ ಹಿಂಬಾಲಿಸುವಿಕ) ಅನ್ವಯ ಕೇಸು ದಾಖಲಿಸಿಕೊಂಡು ಕಾನೂನು ಕ್ರಮ ಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News