ಹಸಿವೆಯಿಂದ ಬಳಲುವ ಜನರ ಸಂಖ್ಯೆಯಲ್ಲಿ ಪ್ರತಿ ವರ್ಷ ಹೆಚ್ಚಳ: ವಿಶ್ವಸಂಸ್ಥೆ ವರದಿ

Update: 2019-07-16 14:16 GMT

ವಿಶ್ವಸಂಸ್ಥೆ, ಜು. 16: ಕಳೆದ ವರ್ಷ ವಿಶ್ವಾದ್ಯಂತ 82.1 ಕೋಟಿಗೂ ಅಧಿಕ ಜನರು ಹಸಿವಿನಿಂದ ಬಳಲಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ವರದಿ ಮಾಡಿದೆ. ಈ ಸಂಖ್ಯೆಯು ಸತತ ಮೂರನೇ ವರ್ಷ ಹೆಚ್ಚಾಗಿದೆ.

ದಶಕಗಳ ಕಾಲ ಈ ಸಂಖ್ಯೆಯು ಕ್ಷೀಣಿಸಿದ ಬಳಿಕ, 2015ರಲ್ಲಿ ಅಪೌಷ್ಟಿಕತೆಯು ಹೆಚ್ಚಲು ಆರಂಭಿಸಿತು. ಇದಕ್ಕೆ ಪ್ರಮುಖ ಕಾರಣ ಹವಾಮಾನ ಬದಲಾವಣೆ ಮತ್ತು ಯುದ್ಧ. ಈ ಪ್ರವೃತ್ತಿಯನ್ನು ಹಿಮ್ಮುಖಗೊಳಿಸುವುದು ವಿಶ್ವಸಂಸ್ಥೆಯ 2030ರ ಸಹ್ಯ ಬೆಳವಣಿಗೆ ಗುರಿಗಳ ಪೈಕಿ ಒಂದಾಗಿದೆ. ಭೂಮಿ ಮತ್ತು ಅದರ ಜನರ ಬದುಕನ್ನು ಸುಧಾರಿಸುವುದು 2030ರ ಉದ್ದೇಶವಾಗಿದೆ.

 ಆದರೆ, ಆ ವೇಳೆಗೆ ಯಾರು ಕೂಡ ಹಸಿವೆಯಿಂದ ಬಳಲದ ಜಗತ್ತನ್ನು ಹೊಂದುವುದು ‘ಅಗಾಧ ಸವಾಲು’ ಆಗಿಯೇ ಉಳಿಯಲಿದೆ ಎಂದು ವರದಿ ಹೇಳಿದೆ. ಬೇಕಾದಷ್ಟು ತಿನ್ನಲು ಇಲ್ಲದ ಜನರ ಸಂಖ್ಯೆ 2017ರಲ್ಲಿದ್ದ 81.1 ಕೋಟಿಯಿಂದ 2018ರಲ್ಲಿ ಹೆಚ್ಚಾಗಿದೆ.

‘‘2030ರ ವೇಳೆಗೆ ನಾವು ಶೂನ್ಯ ಹಸಿವನ್ನು ಸಾಧಿಸುವುದಿಲ್ಲ’’ ಎಂದು ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯಸ್ಥ ಡೇವಿಡ್ ಬೀಸ್ಲೆ ಹೇಳಿದ್ದಾರೆ.

‘‘ಇದು ಕೆಟ್ಟ ಪ್ರವೃತ್ತಿಯಾಗಿದೆ. ಆಹಾರ ಭದ್ರತೆಯಿಲ್ಲದೆ ನಾವು ಯಾವತ್ತೂ ಶಾಂತಿ ಮತ್ತು ಸ್ಥಿರತೆಯನ್ನು ಹೊಂದಲು ಸಾಧ್ಯವಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳಲ್ಲಿ ಹಸಿವೆಯಿಂದ ಸಾಯುವ ಮಕ್ಕಳಿಗೆ ಮಹತ್ವವಿಲ್ಲ

‘‘ಮಾಧ್ಯಮಗಳು ಹಸಿವೆಯಿಂದ ಸಾಯುವ ಮಕ್ಕಳ ಬದಲಿಗೆ ಬ್ರೆಕ್ಸಿಟ್ ಮತ್ತು ಡೊನಾಲ್ಡ್ ಟ್ರಂಪ್ ಬಗ್ಗೆ ಹೆಚ್ಚು ಮಾತುಗಳನ್ನು ಆಡುತ್ತಿವೆ’’ ಎಂಬುದಾಗಿ ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯಸ್ಥ ಡೇವಿಡ್ ಬೀಸ್ಲೆ ವಿಷಾದಿಸಿದರು.

ಭಯೋತ್ಪಾದಕ ಗುಂಪುಗಳು ಹಸಿವೆ ಮತ್ತು ಆಹಾರ ಪೂರೈಕೆಗಳ ಮೇಲಿನ ನಿಯಂತ್ರಣವನ್ನು ಸಮುದಾಯಗಳನ್ನು ವಿಭಜಿಸಲು ಅಥವಾ ಹೊಸ ಸದಸ್ಯರನ್ನು ನೇಮಿಸಿಕೊಳ್ಳಲು ಆಯುಧಗಳನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News