ರಾಜಧಾನಿಯಲ್ಲಿ ವರ್ಷಕ್ಕೆ 92 ಸಾವಿರ ಟನ್ ಇ-ತ್ಯಾಜ್ಯ ಉತ್ಪಾದನೆ

Update: 2019-07-16 16:53 GMT

ಬೆಂಗಳೂರು, ಜು.16: ರಾಜಧಾನಿಯಲ್ಲಿ ಪ್ರತಿ ವರ್ಷ ಅಂದಾಜು 92 ಸಾವಿರ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರ ನಿರ್ವಹಣೆಯನ್ನು ಸಮರ್ಪಕಗೊಳಿಸಲು ಬಿಬಿಎಂಪಿ ಆಂದೋಲನವನ್ನು ಆರಂಭಿಸಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಪರಿಸರ ಪ್ರೇಮಿಗಳು ಕಾತರರಾಗಿದ್ದಾರೆ.

ಇನ್ನು, ಆಂದೋಲನದ ಭಾಗವಾಗಿ ಜುಲೈ 15ರಿಂದ ಆ.15ರವರೆಗೆ ಪಾಲಿಕೆಯ ಎಲ್ಲ 8 ವಲಯ ಕಚೇರಿಗಳಲ್ಲಿ ಇ-ತ್ಯಾಜ್ಯ ಡಬ್ಬಿಗಳನ್ನು ಇಡಲಾಗುತ್ತಿದೆ. ಸಾಹಸ್ ಸಂಸ್ಥೆ ಬಿ-ರೆಸ್ಪಾನ್ಸಿಬಲ್ ಆಂದೋಲನ ಪ್ರಾರಂಭಿಸಿದೆ. ಬಿಬಿಎಂಪಿಯಲ್ಲಿ 9 ಸಾವಿರ ಸಿಬ್ಬಂದಿಯಿದ್ದು, ಅವರ ಮನೆಯ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಡಬ್ಬಿಗಳನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ಸಾರ್ವಜನಿಕರೂ ಇ-ತ್ಯಾಜ್ಯ ಹಾಕಬಹುದು ಎಂದು ಬಿಬಿಎಂಪಿ ತಿಳಿಸಿದೆ.

ಕೆಲವರು ಇ-ತ್ಯಾಜ್ಯವನ್ನು ಗುಜರಿಗೆ ಹಾಕುತ್ತಿದ್ದಾರೆ. ಅಲ್ಲಿ ಇ-ತ್ಯಾಜ್ಯದಲ್ಲಿನ ಬೆಲೆ ಬಾಳುವ ಅಂಶಗಳನ್ನು ಮಾತ್ರ ಕರಗಿಸಿಕೊಂಡು ಉಳಿದವನ್ನು ಬಿಸಾಡಲಾಗುತ್ತಿದೆ. ತ್ಯಾಜ್ಯ ಕರಗಿಸಲು ಆ್ಯಸಿಡ್‌ನಿಂದ ಸುಡುವುದು ಮತ್ತು ಬೆಂಕಿ ಹಚ್ಚುವ ಅಪಾಯಕಾರಿ ವಿಧಾನ ಬಳಸಲಾಗುತ್ತದೆ. ಆ್ಯಸಿಡ್‌ನಲ್ಲಿ ಕಲೆತ ಇ-ತ್ಯಾಜ್ಯದ ಅಂಶ ನೀರಿಗೆ ಸೇರುವುದರಿಂದ ಅಂತರ್ಜಲ ಕಲುಷಿತಗೊಳ್ಳುತ್ತದೆ. ಸುಡುವುದರಿಂದ ವಾಯು ಮಾಲಿನ್ಯವಾಗುತ್ತದೆ.

ಸಾಹಸ್ ಸಂಸ್ಥೆ ಇ-ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಶ್ರಮಿಸುತ್ತಿದ್ದು, 2016ರಿಂದ ಇಲ್ಲಿಯವರೆಗೆ ಅಂದಾಜು 45 ಟನ್ ಇ-ತ್ಯಾಜ್ಯ ಸಂಗ್ರಹಿಸಿದೆ. ಕಳೆದ ತಿಂಗಳು ಬೆಂಗಳೂರಿನ ಆಯ್ದ 100 ಅಂಚೆ ಕಚೇರಿಗಳಲ್ಲಿ ಇ-ತ್ಯಾಜ್ಯ ಸಂಗ್ರಹ ಆಂದೋಲನವನ್ನು ಸಂಸ್ಥೆ ಪ್ರಾರಂಭಿಸಿತ್ತು. ಈ ವೇಳೆ 750 ಕೆ.ಜಿ ಇ-ತ್ಯಾಜ್ಯ ಸಂಗ್ರಹವಾಗಿದೆ. ಇ-ತ್ಯಾಜ್ಯ ಸಂಗ್ರಹಕ್ಕೆ ಮೊ: 73497 37586 ಸಹಾಯವಾಣಿಗೆ ಕರೆ ಮಾಡಬಹುದು.

ಈ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ ಅದು ಭೂಮಿಯ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ತ್ಯಾಜ್ಯದಲ್ಲಿನ ಆರ್ಸೆನಿಕ್, ಸೀಸ, ಪಾದರಸ, ಲೆಡ್, ನಿಕ್ಕಲ್, ಕ್ಯಾಡ್ಮಿಯಂ ಆಕ್ಸೆಡ್, ಸೆಲೇನಿಯಂ ಮುಂತಾದ ವಿಷಯುಕ್ತ ಅನಿಲಗಳಿಂದ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮರುಬಳಕೆಯ ಸಂಸ್ಕೃತಿ ಮಾಯವಾಗಿದ್ದು, ಇ-ತ್ಯಾಜ್ಯ ಉತ್ಪಾದನೆ ಹೆಚ್ಚಾಗಿದೆ. ಇದರ ಸರ್ಮಪಕ ನಿರ್ವಹಣೆಗೆ ಸಾಹಸ್ ಯೋಜನೆ ರೂಪಿಸುತ್ತಿದ್ದು, ಪ್ರಾಯೋಗಿಕವಾಗಿ ಕೋರಮಂಗಲದಲ್ಲಿ ಇ-ತ್ಯಾಜ್ಯ ಕೇಂದ್ರ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನ್ಯತೆ ಪಡೆದ ಇ-ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ನೀಡಲಾಗುವುದು ಎಂದು ಸಾಹಸ್ ಸಂಸ್ಥೆಯ ಇ-ತ್ಯಾಜ್ಯ ಯೋಜನಾಧಿಕಾರಿ ರಾಜಲಕ್ಷ್ಮೀ ವಿವರಿಸಿದರು.

ಇದೆಲ್ಲಾ ಇ-ತ್ಯಾಜ್ಯ

ಬಳಸಿ ಬಿಸಾಡಿದ ಕಂಪ್ಯೂಟರ್, ಟಿವಿ, ಮೊಬೈಲ್, ಸ್ಮಾರ್ಟ್‌ಫೋನ್, ಫ್ರಿಡ್ಜ್, ವಾಷಿಂಗ್ ಮೆಷೀನ್, ಓವನ್, ಪ್ರಿಂಟರ್, ಕೀ ಬೋರ್ಡ್, ಏರ್ ಕಂಡೀಷನರ್, ಜೆರಾಕ್ಸ್ ಸೇರಿ 23 ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಇ-ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ.

ನಗರದಲ್ಲಿ ಉತ್ಪತ್ತಿಯಾಗುವ ಇ-ತ್ಯಾಜ್ಯದಲ್ಲಿ ಶೇ.30ರಷ್ಟು ಮಾತ್ರ ಮರು ಸಂಸ್ಕರಣವಾಗುತ್ತಿದ್ದು, ಇದರಲ್ಲೂ ಶೇ.10ರಷ್ಟು ಮಾತ್ರ ಸೂಕ್ತ ರೀತಿಯಲ್ಲಿ ಸಂಸ್ಕರಣೆಯಾಗುತ್ತಿದೆ.

-ರಾಜಲಕ್ಷ್ಮೀ, ಸಾಹಸ್ ಸಂಸ್ಥೆಯ ಇ-ತ್ಯಾಜ್ಯ ಯೋಜನಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News