ಬಿಬಿಎಂಪಿಯ 110 ಹಳ್ಳಿಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಯಶಸ್ವಿ

Update: 2019-07-16 17:23 GMT

ಬೆಂಗಳೂರು, ಜು.16: ನಗರದ ಕೇಂದ್ರ ಭಾಗಕ್ಕಿಂತ ಹೊರವಲಯದಲ್ಲಿರುವ ಬಿಬಿಎಂಪಿಯ ಐದು ವಲಯಗಳ 110 ಹಳ್ಳಿಗಳಲ್ಲಿ ನಿರ್ಮಾಣಗೊಂಡಿರುವ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಯಶಸ್ವಿಯಾಗುತ್ತಿದೆ.

ನೀರಿನ ಸಮಸ್ಯೆ ಜಟಿಲವಾಗಿರುವುದು ಹಾಗೂ ಕಾವೇರಿ ನೀರು ಪೂರೈಕೆಯಾಗದಿರುವುದರಿಂದ ಈ ಪ್ರದೇಶದಲ್ಲಿ ನೆಲೆಸಿರುವ ನಿವಾಸಿಗಳು ಮಳೆ ನೀರು ಸಂಗ್ರಹಿಸಿ ಬಳಕೆ ಮಾಡುತ್ತಿದ್ದಾರೆ. 110 ಹಳ್ಳಿಗಳಲ್ಲಿ ಕಾವೇರಿ ನೀರಿಗಾಗಿ ಅರ್ಜಿ ಸಲ್ಲಿಸಿದ 7,246 ಕಟ್ಟಡಗಳ ಪೈಕಿ (ಅಪಾರ್ಟ್‌ಮೆಂಟ್, ಮನೆಗಳು) 1,191 ಕಟ್ಟಡಗಳು ಮಳೆ ನೀರು ಕೊಯ್ಲು ಅಳವಡಿಸಿಕೊಂಡಿವೆ.

ನಗರದಲ್ಲಿ 2009 ಕ್ಕಿಂತ ಹಿಂದೆ ನಿರ್ಮಾಣವಾದ 60/40 ಚದರಡಿ ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಹಾಗೂ ನಂತರ ನಿರ್ಮಾಣವಾದ 30/40 ಚದರಡಿ ವಿಸ್ತೀರ್ಣದ ಕಟ್ಟಡಕ್ಕೆ ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಜಲಮಂಡಳಿಯಿಂದ ಕಾವೇರಿ ನೀರು ಸಂಪರ್ಕ ಹೊಂದಿದ ಕಟ್ಟಡಗಳಲ್ಲಿ ಇದುವರೆಗೆ 1,26,331 ಕಟ್ಟಡಗಳು ಕೊಯ್ಲು ಅಳವಡಿಸಿಕೊಂಡಿವೆ.

ಇನ್ನು 65,464 ಕಟ್ಟಡಗಳು ನೀರಿನ ಸಂಪರ್ಕ ಪಡೆದರೂ ಕೊಯ್ಲು ಅಳವಡಿಕೆಗೆ ಮನಸ್ಸು ಮಾಡಿಲ್ಲ. ಈ ಕಟ್ಟಡಗಳಿಗೆ ಪ್ರತಿ ತಿಂಗಳು ನೀರಿನ ಶುಲ್ಕದಲ್ಲೆ ದಂಡ ವಿಧಿಸಲಾಗುತ್ತಿದೆ. 110 ಹಳ್ಳಿಗಳ ಪೈಕಿ 40 ಹಳ್ಳಿಗಳಲ್ಲಿ ಕಾವೇರಿ ಸಂಪರ್ಕ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಬಿಬಿಎಂಪಿಯ ನಾಲ್ಕು ವಲಯಗಳಲ್ಲಿ ಅರ್ಜಿ ಸಲ್ಲಿಸಿದ 7,246 ಕಟ್ಟಡಗಳ ಪೈಕಿ 1,191 ಕಟ್ಟಡಗಳಲ್ಲಿ ಕೊಯ್ಲು ಅಳವಡಿಕೆಯಾಗಿದೆ.

ಮಳೆ ನೀರು ಕೊಯ್ಲು ಅಳವಡಿಕೆ ಮಾಡಿದರೆ ಮಾತ್ರ ಜಲಮಂಡಳಿಯಿಂದ ಕಾವೇರಿ ನೀರು ಸಂಪರ್ಕ ದೊರೆಯುತ್ತದೆ ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಮುಂದಾದ ಹಲವು ಕಟ್ಟಡಗಳಿಗೆ ಕೊಯ್ಲು ಅಳವಡಿಕೆಯಾದ ನಂತರ ಅರ್ಜಿ ವಿಲೇವಾರಿ ಮಾಡುವುದಾಗಿ ಸೂಚಿಸಲಾಗಿತ್ತು. ಈ ಷರತ್ತಿಗೆ ಮಣಿದ ಹಲವು ಕಟ್ಟಡಗಳು ಅರ್ಜಿ ಸಲ್ಲಿಸಿದ ನಂತರ ಕೊಯ್ಲು ಅಳವಡಿಸಿಕೊಂಡ ಉದಾಹರಣೆಗಳೂ ಇವೆ.

110 ಹಳ್ಳಿಗಳಲ್ಲಿ ನಿವಾಸಿಗಳು ಬೋರ್‌ವೆಲ್ ಹಾಗೂ ಟ್ಯಾಂಕರ್ ನೀರಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ಬರಿದಾಗಿವೆ. ಟ್ಯಾಂಕರ್ ನೀರು ಬಳಕೆಗೆ ಯೋಗ್ಯವಾಗಿಲ್ಲ. ಜತೆಗೆ ಕೊಳವೆಬಾವಿ ಹಾಗೂ ಟ್ಯಾಂಕರ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದೆ. ಈ ನೀರು ಬಳಕೆ ಮಾಡುವುದರಿಂದ ತಲೆಗೂದಲು ಉದುರುವುದು, ಚರ್ಮ ರೋಗ ಕಾಣಿಸಿಕೊಳ್ಳುತ್ತಿದೆ. ಈ ಕಾರಣಕ್ಕೆ ಜನರು ಕೊಳವೆಬಾವಿ ಬಳಕೆ ಮಾಡುವುದನ್ನು ಬಿಟ್ಟು ಮಳೆ ನೀರು ಸಂಗ್ರಹಿಸಿ ಉಪಯೋಗಿಸುತ್ತಿದ್ದಾರೆ. ಇದರಿಂದ ನೀರಿನ ಬಿಲ್ ಕಟ್ಟುವ ಪ್ರಮೇಯ ಇರುವುದಿಲ್ಲ. ಜೊತೆಗೆ ಅಗತ್ಯದಷ್ಟು ನೀರು ಸಿಗಲಿದೆ.

ಇನ್ನು, ಬಿಬಿಎಂಪಿಯ ಐದು ವಲಯಗಳ ವ್ಯಾಪ್ತಿಗೆ ಬರುವ 110 ಹಳ್ಳಿಗಳಲ್ಲಿ ಕಾವೇರಿ ನೀರು ನೀಡಲು ಕೊಳವೆ ಜಾಲ ನಿರ್ಮಿಸಲಾಗುತ್ತಿದೆ. ಇದುವರೆಗೆ 2,401.24 ಕಿ.ಮೀ. ಉದ್ದದ ಕೊಳವೆ ಅಳವಡಿಸಲಾಗಿದೆ. 40 ಹಳ್ಳಿಗಳ ಪೈಕಿ ಬಹುತೇಕ ಕಡೆ ಪಂಪ್ ಮಾಡದೆ ಗುರುತ್ವಾಕರ್ಷಣೆ ಮೂಲಕ ಇಳಿಜಾರಿನಿಂದ ನೀರು ಹರಿಸಲು ಸಾಧ್ಯವಿದೆ. ಇಂತಹ ಹಳ್ಳಿಗಳಿಗೆ ಮೊದಲ ಹಂತದಲ್ಲಿ ನೀರಿನ ಸಂಪರ್ಕ ನೀಡಲಾಗಿದೆ.

110 ಹಳ್ಳಿಗಳಲ್ಲಿನ ಹೆಚ್ಚು ನಿವಾಸಿಗಳು ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದ್ದು, ಈ ಭಾಗಕ್ಕೆ ಕಾವೇರಿ ನೀರು ನೀಡಲು ಕೊಳವೆ ಅಳವಡಿಸಲಾಗುತ್ತಿದೆ. ಅಲ್ಲದೆ, ಇಲ್ಲಿನ ಜನರಿಗೆ ನೀರಿನ ಸಂರಕ್ಷಣೆ ಕುರಿತು ಹೆಚ್ಚು ಜಾಗೃತಿ ಇದೆ.

-ತುಷಾರ್ ಗಿರಿನಾಥ್, ಅಧ್ಯಕ್ಷ, ಜಲಮಂಡಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News