ನಾಳೆ ವಿಶ್ವಾಸಮತ ಯಾಚನೆ: ಅಳಿವು-ಉಳಿವಿನ ಲೆಕ್ಕಾಚಾರದಲ್ಲಿ ಮೈತ್ರಿ ಸರಕಾರ

Update: 2019-07-17 16:35 GMT

ಬೆಂಗಳೂರು, ಜು. 17: ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಮೈತ್ರಿ ಸರಕಾರದ ಅಳಿವು-ಉಳಿವಿನ ಪ್ರಶ್ನೆಗೆ ನಾಳೆ(ಜು.18) ವಿಧಾನ ಮಂಡಲ ಅಧಿವೇಶನದಲ್ಲಿ ನಡೆಯಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿಶ್ವಾಸಮತ ಯಾಚನೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

‘ವಿಶ್ವಾಸಮತ ಯಾಚನೆ’ ಪ್ರಕ್ರಿಯೆ ನಡೆಸುವ ಸಂಬಂಧ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ, ಶಾಸಕರಿಗೆ ವಿಪ್ ಜಾರಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸ್ಪೀಕರ್ ರಮೇಶ್‌ಕುಮಾರ್ ಸಮಾಲೋಚನೆ ನಡೆಸಿದರು.

‘ಸದನದಲ್ಲಿ ಭಾಗವಹಿಸುವ ಅಥವಾ ಭಾಗವಹಿಸದಿರುವುದು ಶಾಸಕರ ವಿವೇಚನೆಗೆ ಬಿಟ್ಟದ್ದು. ಅವರನ್ನು ನಿಬಂಧನೆಗೊಳಪಡಿಸಬಾರದು’ ಎಂದು ಕೋರ್ಟ್ ಹೇಳಿದೆ. ಆದರೆ, ವಿಪ್ ಜಾರಿ ಮಾಡಬಾರದು ಎಂದು ಯಾವುದೇ ಆದೇಶವನ್ನು ನೀಡಿಲ್ಲ’ ಎಂದು ಮೈತ್ರಿ ಮುಖಂಡರು ಹೇಳುತ್ತಿದ್ದಾರೆ.

ಶಾಸಕರ ರಾಜೀನಾಮೆ, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸರಕಾರ ಉರುಳುವ ‘ಆತಂಕಕ್ಕೆ ಸಿಲುಕಿರುವ’ ಸಿಎಂ ಕುಮಾರಸ್ವಾಮಿ ಸೇರಿ ಮೈತ್ರಿ ಮುಖಂಡರು ದಿನವಿಡಿ ಸ್ಪೀಕರ್, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾನೂನು ತಜ್ಞರ ಜತೆ ಚರ್ಚಿಸಿದರು.

ಕಾನೂನು ಮತ್ತು ತಾಂತ್ರಿಕ ಕಾರಣಗಳನ್ನು ನೀಡಿ ಮೈತ್ರಿ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ ಮುಖಂಡರು, ನಾಳೆ(ಜು.18) ಕಲಾಪದಲ್ಲಿ ಸರಕಾರದ ಸಮರ್ಥನೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಆದೇಶಕ್ಕೆ ಬದ್ಧ: ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ಗುರುವಾರ (ಜು.18) ವಿಶ್ವಾಸಮತ ಯಾಚನೆಗೆ ಅಡ್ಡಿಯಿಲ್ಲ. ಈ ಬಗ್ಗೆ ಅನುಮಾನ ಬೇಡ. ರಾಜಕೀಯ ಲೆಕ್ಕಾಚಾರ ಆಯಾ ಪಕ್ಷಗಳಿಗೆ ಸಂಬಂಧಿಸಿದ್ದು. ಯಾರನ್ನೋ ತೃಪ್ತಿಪಡಿಸುವುದು ನನ್ನ ಕೆಲಸವಲ್ಲ. ಶಾಸಕರನ್ನು ಸದನಕ್ಕೆ ಕರೆಸುವುದು ನನ್ನ ಜವಾಬ್ದಾರಿಯಲ್ಲ. ಇದು ಪಕ್ಷಗಳ ಜವಾಬ್ದಾರಿ. ಸದನದಲ್ಲಿ ನಾನು ಮುಖ್ಯಸ್ಥ ಅಷ್ಟೇ. ಸದನದಲ್ಲಿ ಸಾಂದರ್ಭಿಕವಾಗಿ ಏನು ನಡೆಯುತ್ತದೆಯೋ, ಯಾರಿಗೆ ಏನು ಆಶಾಭಾವನೆ ಇದೆಯೋ ಹಾಗೂ ಯಾವ ರೀತಿಯ ಬೆಳವಣಿಗೆ ಆಗುತ್ತದೆಯೋ ನನಗೆ ಗೊತ್ತಿಲ್ಲ. ಸದನದ ನಿಯಮಾವಳಿ ಬಿಟ್ಟು ನಾನು ಯಾವುದೇ ಕಾರಣಕ್ಕೂ ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂವಿಧಾನ ಮತ್ತು ಸದನದ ನಿಯಮಾವಳಿ ಪ್ರಕಾರ ನಡೆದುಕೊಳ್ಳುತ್ತೇನೆ. ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಳಂಬವಿಲ್ಲದೆ ನಾನು ಕಾರ್ಯ ನಿರ್ವಹಿಸುತ್ತೇನೆ. ಶಾಸಕರ ರಾಜೀನಾಮೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ಬಗ್ಗೆ ಕೋರ್ಟ್ ಕಾಲಮಿತಿ ನಿಗದಿಪಡಿಸಿಲ್ಲ. ಹೀಗಾಗಿ ನನ್ನ ಜವಾಬ್ದಾರಿ ಹೆಚ್ಚಿದೆ ಎಂದು ಅವರು ಹೇಳಿದರು.

ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಕೋರ್ಟ್ ಆದೇಶವನ್ನು ನಮ್ರತೆಯಿಂದ ಪಾಲಿಸುತ್ತೇನೆ. ಸಂವಿಧಾನದ ಆಶಯ ಹಾಗೂ ಕೋರ್ಟ್ ವಿಶ್ವಾಸಕ್ಕೆ ಬದ್ಧವಾಗಿ ನಾನು ನಡೆದುಕೊಳ್ಳುತ್ತೇನೆ ಎಂದು ರಮೇಶ್‌ಕುಮಾರ್ ಇದೇ ವೇಳೆ ಸ್ಪಷ್ಟಣೆ ನೀಡಿದರು.

ಸ್ಪೀಕರ್, ಓರ್ವ ನಾಮನಿರ್ದೇಶಿತ ಸೇರಿ 225 ಮಂದಿ ಸದಸ್ಯ ಬಲದ ವಿಧಾನಸಭೆ 15 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ 210ಕ್ಕೆ ಕುಸಿದಿದ್ದು, ಸರಳ ಬಹುಮತಕ್ಕೆ 105ರ ಸಂಖ್ಯಾಬಲ ಅಗತ್ಯವಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಂಖ್ಯಾಬಲ 101ಕ್ಕೆ ಕುಸಿದಿದೆ. ಇಬ್ಬರು ಪಕ್ಷೇತರ ಸದಸ್ಯರು ಸೇರಿದರೆ ಬಿಜೆಪಿಗೆ 107 ಸದಸ್ಯರ ಸಂಖ್ಯಾಬಲ ಇರಲಿದೆ.

ಮೇಲುನೋಟಕ್ಕೆ ಬಿಜೆಪಿಗೆ ಸಂಖ್ಯಾಬಲವಿದ್ದರೂ ತಾಂತ್ರಿಕವಾಗಿ ರಾಜೀನಾಮೆ ಅಂಗೀಕಾರ ಆಗುವವರೆಗೂ ಶಾಸಕರು ಆಯಾ ಪಕ್ಷದ ಸದಸ್ಯರಾಗಿಯೇ ಇರಲಿದ್ದಾರೆ. ವಿಶ್ವಾಸಮತ ಯಾಚನೆಗೆ ವಿಪ್ ಜಾರಿ ಬಳಿಕ ಅದನ್ನು ಉಲ್ಲಂಘಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕರ ಅನರ್ಹತೆ ಪ್ರಕ್ರಿಯೆಗೆ ಮುಂದಾದರೆ ಅತೃಪ್ತರು ವಾಪಸ್ ಬರುವ ನಿರೀಕ್ಷೆಯಲ್ಲಿ ವೆೆುತ್ರಿ ಮುಖಂಡರಿದ್ದಾರೆ.

ಮತ್ತೊಂದು ಕಡೆ ಯಾವುದೇ ಕ್ಷಣದಲ್ಲಿಯೂ ಮೈತ್ರಿ ಸರಕಾರ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ಸರಕಾರ ನಿಶ್ಚಿತ ಎಂಬ ವಿಶ್ವಾಸದಲ್ಲಿ ವಿಪಕ್ಷ ಮುಖಂಡರಿದ್ದಾರೆ. ಆದರೆ, ಮುಂದೆ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ವಿಪ್ ಜಾರಿ: ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ತನ್ನ ಎಲ್ಲ ಶಾಸಕರಿಗೆ ವಿಪ್ ಜಾರಿಗೊಳಿಸಿವೆ. ‘ನಾಳೆ (ಜು.18) ವಿಶ್ವಾಸಮತದ ನಿರ್ಣಯ ಮಂಡಿಸಲಿದ್ದು, ತಾವು ಸದಸನದಲ್ಲಿ ಕಡ್ಡಾಯವಾಗಿ ಹಾಜರಿದ್ದು ವಿಶ್ವಾಸಮತದ ಚರ್ಚೆ ಪ್ರಾರಂಭವಾದ ದಿನದಿಂದ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಸದನದಲ್ಲಿ ಹಾಜರಿರಬೇಕು’.

‘ಅಲ್ಲದೆ, ವಿಶ್ವಾಸ ಮತದ ಪರವಾಗಿ ಮತ ನೀಡಬೇಕು. ಹಾಗೇನಾದರೂ ತಾವು ಗೈರು ಹಾಜರಾದಲ್ಲಿ ಅಥವಾ ಹಾಜರಾಗಿ ಮತ ಚಲಾಯಿಸದಿದ್ದಲ್ಲಿ ಅಥವಾ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದಲ್ಲಿ ಪಕ್ಷಾಂತರ ನಿಷೇಧ ಕಾನೂನಿನಡಿ ತಮ್ಮನ್ನು ಶಾಸಕ ಸ್ಥಾನದಿಂಧ ಅನರ್ಹಗೊಳಿಸಲು ಭಾರತೀಯ ಸಂವಿಧಾನದ ಅನುಚ್ಚೇದ-10ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆಯ ಚರ್ಚೆ ನಾಳೆ ಆರಂಭಗೊಳ್ಳಲಿದ್ದು, ಅದು ಸೋಮವಾರ(ಜು.22)ದ ವರೆಗೂ ಮುಂದುವರೆಯುವ ಸಾಧ್ಯತೆಗಳಿವೆ. ಒಂದು ವೇಳೆ ವಿಪಕ್ಷ ಬಿಜೆಪಿ ಅಡ್ಡಿಪಡಿಸಿದರೆ ಗದ್ದಲ-ಕೋಲಾಹಲ ಸೃಷ್ಟಿ ಆಗಬಹುದು. ಆ ಬಳಿಕ ಸರಕಾರಕ್ಕೆ ಬಹುಮತ ಸಿಗದಿದ್ದರೆ ವಿದಾಯ ಭಾಷಣ ಮಾಡಿ ಸಿಎಂ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News