ತುರ್ತು ಪ್ರತಿಕ್ರಿಯಾ ಘಟಕಗಳ ಸ್ಥಾಪನೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ನಿರ್ದೇಶ

Update: 2019-07-17 15:40 GMT

 ಹೊಸದಿಲ್ಲಿ,ಜು.17: ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಮಾನವ ಬಲವನ್ನು ಬಳಸುವ ಅನಿಷ್ಟ ಪದ್ಧತಿಗೆ ಅಂತ್ಯ ಹಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡಿರುವ ಕೇಂದ್ರವು,ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಸಂದರ್ಭಗಳಲ್ಲಿ ಸಾವುಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದೆ.

  ಮಹಾನಗರ ಪಾಲಿಕೆ,ಜಲ ಮತ್ತು ಒಳಚರಂಡಿ ಮಂಡಳಿ ಹಾಗೂ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಪ್ರಮುಖ ನಗರಗಳಲ್ಲಿ ತುರ್ತು ಪ್ರತಿಕ್ರಿಯಾ ನೈರ್ಮಲ್ಯ ಘಟಕಗಳನ್ನು ಸ್ಥಾಪಿಸುವಂತೆ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ ಮಿಶ್ರಾ ಅವರು ಜು.12ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ. ಈ ಘಟಕಗಳು 75 ಕಿ.ಮೀ.ಅಂತರದೊಳಗಿರುವ ಸಣ್ಣ ಪಟ್ಟಣಗಳಿಂದ ನೈರ್ಮಲ್ಯ ತುರ್ತು ಕರೆಗಳಿಗೆ ಸ್ಪಂದಿಸುವ ಜವಾಬ್ದಾರಿಯನ್ನೂ ಹೊಂದಿರಲಿವೆ.

  ಒಳಚರಂಡಿಗಳು ಮತ್ತು ಮಲಗುಂಡಿಗಳ ಸ್ವಚ್ಛತೆಗಾಗಿ ದೈಹಿಕವಾಗಿ ಮಾನವ ಬಳಕೆಯನ್ನು ಕಾನೂನಿನಡಿ ನಿಷೇಧಿಸಲಾಗಿದ್ದರೂ ಅಲ್ಲಲ್ಲಿ ಇದರ ಉಲ್ಲಂಘನೆಗಳು ನಡೆಯುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಮಿಕರಿಗೆ ರಕ್ಷಣಾ ಸಾಧನಗಳು,ತರಬೇತಿ ಅಥವಾ ಅಗತ್ಯ ಬೆಂಬಲವನ್ನು ಒದಗಿಸಲಾಗುತ್ತಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.

ಒಳಚರಂಡಿಗಳು ಮತ್ತು ಮಲಗುಂಡಿಗಳನ್ನು ಯಾಂತ್ರಿಕವಾಗಿ ಸ್ವಚ್ಛಗೊಳಿಸುವುದನ್ನು ಉತ್ತೇಜಿಸಬೇಕಿದ್ದರೂ ಮಾನವರು ಸ್ವಚ್ಛತೆಗಾಗಿ ಅವುಗಳಿಗೆ ಇಳಿಯುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ ಮತ್ತು ಇವುಗಳನ್ನು ತಪ್ಪಿಸಲು ಸಾಧ್ಯವಿಲ್ಲ.ಜಿಲ್ಲಾಧಿಕಾರಿಗಳು ಅಥವಾ ಮುನ್ಸಿಪಲ್ ಆಯುಕ್ತರನ್ನು ಜವಾಬ್ದಾರಿಯುತ ನೈರ್ಮಲ್ಯ ಪ್ರಾಧಿಕಾರಿಗಳನ್ನಾಗಿ ನಿಯೋಜಿಸಲಾಗುತ್ತದೆ ಮತ್ತು ಅವರು ತುರ್ತು ಘಟಕಗಳ ಸಿಬ್ಬಂದಿಗಳನ್ನು ಸಂಘಟಿಸಬೇಕಾಗುತ್ತದೆ. ತರಬೇತಾದ,ಅಗತ್ಯ ಸಾಧನಗಳನ್ನು ಹೊಂದಿರುವ ಮತ್ತು ಒಳಚರಂಡಿ ಪ್ರವೇಶ ವೃತ್ತಿಪರರು ಎಂದು ಪ್ರಮಾಣಪತ್ರ ಪಡೆದಿರುವವರನ್ನು ಮಾತ್ರ ಒಳಚರಂಡಿಗಳು ಮತ್ತು ಮಲಗುಂಡಿಗಳಿಗೆ ಇಳಿಯಲು ಅನುಮತಿ ನೀಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸುರಕ್ಷತಾ ಸಾಧನಗಳಿಲ್ಲದೆ ಒಳಚರಂಡಿಗಳನ್ನು ಪ್ರವೇಶಿಸುವುದನ್ನು ಅಪರಾಧವನ್ನಾಗಿಸುವಂತೆ ಮಾರ್ಚ್ 2014ರಲ್ಲಿ ಕರೆ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು,ಇಂತಹ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ 10 ಲ.ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News