ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡೆಂಗ್

Update: 2019-07-18 17:32 GMT

ಬೆಂಗಳೂರು, ಜು.18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನೇ ದಿನೇ ಡೆಂಗ್ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವರ್ಷ ಇಲ್ಲಿಯವರೆಗೂ 2,951 ಪ್ರಕರಣಗಳು ವರದಿಯಾಗಿವೆ.

ಇನ್ನು ರಾಜ್ಯದಲ್ಲಿ 15 ದಿನಗಳಲೇ 1,660 ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ ಈ ವೇಳೆಗೆ 2,079 ಮಂದಿ ಈ ಜ್ವರಕ್ಕೆ ಬಳಲಿ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೆ, ದಕ್ಷಿಣ ಕನ್ನಡ 319, ಶಿವಮೊಗ್ಗ 206, ಕಲಬುರ್ಗಿ 134, ಹಾವೇರಿ129, ಹಾಸನ107, ಚಿಕ್ಕಮಗಳೂರು 105 ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಈಡೀಸ್ ಸೊಳ್ಳೆಯಿಂದ ಹರಡುವ ಡೆಂಗ್ ಬಗ್ಗೆ ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಜ್ವರದ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. ಈ ವರ್ಷ ಜ್ವರಕ್ಕೆ ಒಳಪಟ್ಟವರ ಸಂಖ್ಯೆ ದುಪ್ಪಟ್ಟಾಗಿದ್ದು, ಈವರೆಗೆ 4,718 ಮಂದಿ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆ ದಾಖಲಾಗಿದ್ದಾರೆ.

ಮಳೆಗಾಲದಲ್ಲಿ ಸಹಜವಾಗಿ ಡೆಂಗ್ ಪ್ರಕರಣಗಳು ಹೆಚ್ಚಾಗುತ್ತವೆ. ಈಡೀಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಜ್ವರ ಬರುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆ ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆ ಇಟ್ಟು, ಸಂತಾನೋತ್ಪತ್ತಿ ಮಾಡುತ್ತದೆ. ಜನರಲ್ಲಿ ಸ್ವಚ್ಛತೆ ಕುರಿತು ಇರುವ ಅಸಡ್ಡೆ ಹಾಗೂ ಜಾಗೃತಿ ಕೊರತೆ ರೋಗ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ತೆಂಗಿನ ಎಣ್ಣೆಯಿಂದ ಸೊಳ್ಳೆ ನಿಯಂತ್ರಣ: ಡೆಂಗ್ ಉಂಟು ಮಾಡುವ ಈಡೀಸ್ ಈಜಿಪ್ಟೆ ಸೊಳ್ಳೆಯ ಸಂತಾನೋತ್ಪತ್ತಿಗೆ ಶುದ್ಧ ನೀರು ಮಾತ್ರ ಬೇಕಾಗಿರುವುದರಿಂದ ಎಣ್ಣೆ ಮಿಶ್ರಿತ ನೀರಲ್ಲಿ ಆ ಸೊಳ್ಳೆ ಮೊಟ್ಟೆ ಇಡುವುದಿಲ್ಲ. ಕಾರಣ ತೆಂಗಿನ ಎಣ್ಣೆಯು ನೀರಿನ ಮೇಲ್ಭಾಗದಲ್ಲಿ ವಿಂಗಡಣೆಯಾಗಿ ಮೊಟ್ಟೆ ನಂತರದ ಪೀಪಾ, ಲಾರ್ವಾ ಸ್ಥಿತಿಯಲ್ಲಿ ಆಮ್ಲಜನಕ ಕೊರತೆ ಉಂಟುಮಾಡಿ ಅದು ಸೊಳ್ಳೆಯಾಗಿ ರೂಪುಗೊಳ್ಳದಂತೆ ತಡೆಯುತ್ತದೆ. ಜತೆಗೆ ತೆಂಗಿನ ಎಣ್ಣೆ ಹಾಕಿದ ನೀರನ್ನು ಕುಡಿಯುವರಿಂದ ಹಿಡಿದು ಮನೆಯ ಎಲ್ಲಾ ಚಟುವಟಿಕೆಗಳಿಗೂ ಬಳಸಬಹುದು ಎಂದು ಬಿಬಿಎಂಪಿ ವೈದ್ಯಾಧಿಕಾರಿ ಡಾ.ಸಂಧ್ಯಾ ತಿಳಿಸಿದರು.

ಮಾಲಕರಿಗೆ ಸೂಚನೆ: ನಗರದಲ್ಲಿ ಸಾವಿರಾರು ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಆ ಸ್ಥಳಗಳಲ್ಲಿ ಹೆಚ್ಚಿನ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಹೀಗಾಗಿ, ಬಿಬಿಎಂಪಿ ವಾರ್ಡ್ ಮಟ್ಟದ ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಿಗೆ ವಾರಕ್ಕೆ ಎರಡು ಬಾರಿ ತೆರಳಿ ಅಲ್ಲಿ ನೀರು ಸಂಗ್ರಹವಾಗಿದ್ದರೆ ರಾಸಾಯನಿಕ ಸಿಂಪಡಿಸಿ ಬಳಿಕ ಮಾಲಕರಿಗೆ ಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳುವ ಸೂಚನೆ ನೀಡುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು ತಿಳಿಸಿದರು.

ಮುಂಜಾಗ್ರತೆ ಕ್ರಮಗಳು: ಯಾವುದೇ ರೀತಿಯ ಜ್ವರ ಕಂಡರೆ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಿರಿ. ಶುದ್ಧ ಹಾಗೂ ಕುದಿಸಿದ ನೀರನ್ನು ಕುಡಿಯುವುದು ಉತ್ತಮ. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ. ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ ಮತ್ತು ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಪರದೆ ಅಳವಡಿಸಿ.

ಜ್ವರದ ಲಕ್ಷಣಗಳು: ಮೈ-ಕೈ ನೋವು, ಅತಿಸಾರ, ಕರುಳಿನಲ್ಲಿ ರಕ್ತಸ್ರಾವ, ಚರ್ಮದಲ್ಲಿ ಕೆಂಪು ಗುಳ್ಳೆ, ದಿಢೀರ್ ಜ್ವರ, ತಲೆನೋವು, ಗಂಟಲು ನೋವು, ವಾಂತಿ ಹಾಗೂ ಹೊಟ್ಟೆ ನೋವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News