ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ಕೈಗಾರಿಕೋದ್ಯಮಿಗಳ ಆತಂಕ

Update: 2019-07-19 05:44 GMT

ಕೈಗಾರಿಕೋದ್ಯಮಿಗಳು ಈ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ ಎನ್ನುವುದನ್ನು ನಾವು ಯಾವ ಕಾರಣಕ್ಕೂ ನಿರಾಕರಿಸುವಂತಿಲ್ಲ. ಗಾಂಧೀಜಿ ಕೃಷಿ ಪ್ರಧಾನವಾಗಿರುವ ಹಳ್ಳಿಯ ಕಡೆಗೆ ಮುಖ ಹಾಕಿ ನಿಂತಾಗ ಭಾರತವನ್ನು ಕೈಗಾರಿಕೆಯೆಡೆಗೆ ಮುನ್ನಡೆಸಿದವರು ನೆಹರೂ. ಈ ಕಾರಣಕ್ಕಾಗಿಯೇ ನೆಹರೂ ಸಾಕಷ್ಟು ಟೀಕೆಗಳನ್ನೂ ಎದುರಿಸಿದ್ದಾರೆ. ಆದರೆ ಕೈಗಾರಿಕೋದ್ಯಮಗಳನ್ನು ನಿರ್ಲಕ್ಷಿಸಿ ಭಾರತ ಆಧುನಿಕತೆಯೆಡೆಗೆ ಕಾಲಿರಿಸಲು ಸಾಧ್ಯವಿಲ್ಲ ಎನ್ನುವುದು ನೆಹರೂ ಅವರ ದೂರದೃಷ್ಟಿಯ ನಿಲುವಾಗಿತ್ತು. ಗಾಂಧೀಜಿಯ ಸರ್ವೋದಯ ತತ್ವಕ್ಕೆ ಇದು ಘಾಸಿ ಮಾಡಿತಾದರೂ, ಭಾರತದ ಅಭಿವೃದ್ಧಿಗೆ ಕೈಗಾರಿಕೆಗಳು ನೀಡಿರುವ ಕೊಡುಗೆಗಳನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಒಂದು ದೇಶ ಅಭಿವೃದ್ಧಿಯೆಡೆಗೆ ಮುನ್ನಡೆಯಬೇಕಾದರೆ, ಆ ದೇಶ ಕ್ಷೋಭೆಗಳಿಂದ ಮುಕ್ತವಾಗಿರಬೇಕು. ಹಿಂಸಾಚಾರ, ದಂಗೆಗಳು ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಹೆಜ್ಜೆಯಿಡುವುದಕ್ಕೆ ಸಾಧ್ಯವಿಲ್ಲ. ಹೆಚ್ಚು ಹೆಚ್ಚು ಬಂಡವಾಳಗಳನ್ನು ಹೂಡುವ ಉದ್ಯಮಿ, ತಾನು ಬಂಡವಾಳ ಹೂಡುವ ಪ್ರದೇಶದ ಕಾನೂನು ಸುವ್ಯವಸ್ಥೆ ಮತ್ತು ಸರಕಾರದ ಮನಸ್ಥಿತಿಯ ಕುರಿತಂತೆ ಚಿಂತಿಸುತ್ತಾನೆ. ಯಾವ ದೇಶದಲ್ಲಿ ಮತಾಂಧತೆ, ಕೋಮುಗಲಭೆಗಳು ತಾಂಡವವಾಡುತ್ತವೆಯೋ ಆ ದೇಶವನ್ನು ಬಂಡವಾಳ ಹೂಡಿಕೆಗೆ ಯೋಗ್ಯ ಸ್ಥಳವೆಂದು ಒಬ್ಬ ಉದ್ಯಮಿ ಭಾವಿಸಲಾರ. ಒಂದೆಡೆ ದೇಶವನ್ನು ಅರಾಜಕತೆಗೆ ತಳ್ಳುತ್ತಾ, ಇನ್ನೊಂದೆಡೆ ಬಂಡವಾಳ ಹೂಡಲು ಉದ್ಯಮಿಗಳನ್ನು ಆಹ್ವಾನಿಸುವುದು ಸರಕಾರವೊಂದರ ದ್ವಂದ್ವ ನಡೆಯೇ ಸರಿ.

ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿಯವರು ಬಂಡವಾಳ ಹೂಡಿಕೆಗಾಗಿ ವಿದೇಶಗಳಲ್ಲಿ ಕರೆ ನೀಡುತ್ತಲೇ ಬಂದಿದ್ದರೂ, ಆ ಕರೆ ವಿಫಲವಾಗುವುದಕ್ಕೆ ಕಾರಣ, ಈ ದೇಶದಲ್ಲಿ ಹೆಚ್ಚುತ್ತಿರುವ ಅರಾಜಕತೆಯಾಗಿದೆ. ದೇಶದ ಕಾನೂನು ಸುವ್ಯವಸ್ಥೆ ಹಂತ ಹಂತವಾಗಿ ಸಂಘಪರಿವಾರದ ಕೈ ಸೇರುತ್ತಿರುವುದು ಮತ್ತು ದೇಶ ಅಭಿವೃದ್ಧಿಯಲ್ಲಿ ನಿಧಾನಕ್ಕೆ ಹಿಂದಕ್ಕೆ ಚಲಿಸುತ್ತಿರುವುದು ಒಂದಕ್ಕೊಂದು ಅಂತರ್‌ಸಂಬಂಧವನ್ನು ಹೊಂದಿದೆ. ಇದು ದೇಶದ ಉದ್ಯಮಿಗಳನ್ನು ಆತಂಕದ ಸ್ಥಿತಿಗೆ ತಳ್ಳಿದೆ. ಇಂದು ದೇಶ ಗುಂಪು ಥಳಿತ, ನಕಲಿ ಗೋರಕ್ಷಕರು, ನಕಲಿ ಸಂಸ್ಕೃತಿ ರಕ್ಷಕರಿಗಾಗಿ ಸುದ್ದಿಯಾಗುತ್ತಿದೆ. ದೇಶದಲ್ಲಿ ಹಿಂದುತ್ವ ಜಾಗೃತಿಯಾಗುತ್ತಿದೆ ಎಂದು ಸಂಘಪರಿವಾರ ವೇದಿಕೆಗಳಲ್ಲಿ ಬಡಬಡಿಸುತ್ತಿದೆಯಾದರೂ, ಹಿಂದೂ ಧರ್ಮವು ಉಂಡಾಡಿಗಳ ಕೈಯಲ್ಲಿ ಸಿಲುಕಿ ಅಪವ್ಯಾಖ್ಯಾನಗಳಿಗೆ ತುತ್ತಾಗುತ್ತಿದೆ. ಒಂದು ಕಾಲದಲ್ಲಿ ಅರವಿಂದ ಘೋಷ್, ಸ್ವಾಮಿ ವಿವೇಕಾನಂದ, ಗಾಂಧೀಜಿಯಂತಹ ಮಹನೀಯರ ಮೂಲಕ ಜಾಗೃತಿಗೊಂಡಿದ್ದ ಹಿಂದೂ ಧರ್ಮದ ಚಿಂತನೆಗಳು ಇಂದು ಬೀದಿ ರೌಡಿಗಳ ಕೈಯಲ್ಲಿರುವ ತ್ರಿಶೂಲಗಳ ಇರಿತಗಳಿಗೆ ನಲುಗುತ್ತಿವೆ. ಅಧಿಕಾರ ಹಿಡಿಯಬೇಕಾದರೆ ದೇಶದಲ್ಲಿ ಹಿಂಸೆ ಜಾಗೃತವಾಗಿರುವುದು ಅನಿವಾರ್ಯ ಎನ್ನುವ ಸ್ಥಿತಿಯಲ್ಲಿದೆ ಬಿಜೆಪಿ. ತನ್ನ ಅಜೆಂಡಾಗಳನ್ನು ಜಾರಿಗೆ ತರಲು ಆರೆಸ್ಸೆಸ್‌ನಂತಹ ಸಂಘಟನೆಗಳಿಗೂ ಹಿಂಸೆ ಅತ್ಯಗತ್ಯವಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯ ವಿರುದ್ಧ ಮಾತನಾಡುತ್ತಿರುವ ಸರಕಾರ, ತನ್ನದೇ ದೇಶದೊಳಗಿರುವ ಕೇಸರಿ ಭಯೋತ್ಪಾದಕರ ವಕಾಲತನ್ನು ವಹಿಸಿಕೊಂಡಿದೆ. ಈ ದೇಶದ ಗೃಹ ಸಚಿವರೇ, ಸಂಜೋತಾ ರೈಲು ಸ್ಫೋಟ ಆರೋಪಿಗಳ ಪರವಾಗಿ ಸಂಸತ್‌ನಲ್ಲಿ ಮಾತನಾಡುತ್ತಿದ್ದಾರೆ. ಪೊಲೀಸ್ ಇಲಾಖೆಗಳ ಒಳಗಿನ ಶಕ್ತಿಗಳೇ ಬೀದಿ ದುಷ್ಕರ್ಮಿಗಳನ್ನು ರಕ್ಷಿಸುತ್ತಿರುವುದರಿಂದ ಪುಂಡು ಪೋಕರಿಗಳಿಗೆಲ್ಲ ಆನೆ ಬಲ ಬಂದಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ದೇಶದಲ್ಲಿ ದಿನೇ ದಿನೇ ಕಾನೂನು ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಇಂತಹ ವಾತಾವರಣದಲ್ಲಿ ಭಾರತ ಅಭಿವೃದ್ಧಿಯೆಡೆಗೆ ಸಾಗುವುದು ಕನಸಿನ ಮಾತಾಗಿದೆ.

ಇಂದು ಸರಕಾರದ ಕುರಿತಂತೆ ಎರಡು ಆರೋಪಗಳಿವೆ. ಒಂದು, ಸರಕಾರವನ್ನು ಸಂಘಪರಿವಾರದ ಚಿಂತನೆಗಳು ನಿಯಂತ್ರಿಸುತ್ತಿವೆೆ. ಎರಡನೆಯದು, ಅದಾನಿ ಮತ್ತು ಅಂಬಾನಿಗಳು ದೇಶದ ಹಿತಾಸಕ್ತಿಯನ್ನು ಸಂಪೂರ್ಣ ಬಲಿಕೊಟ್ಟು ತಮ್ಮ ವೈಯಕ್ತಿಕ ಲಾಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಅಂದರೆ ಸರಕಾರವನ್ನು ಕಾರ್ಪೊರೇಟ್ ವಲಯದ ನಿರ್ದಿಷ್ಟ ಶಕ್ತಿಯಷ್ಟೇ ನಿಯಂತ್ರಿಸುತ್ತಿದೆ. ಈ ಶಕ್ತಿ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿರುವ ಕೈಗಾರಿಕೋದ್ಯಮಗಳನ್ನು ಪ್ರತಿನಿಧಿಸುತ್ತಿಲ್ಲ. ಅದಾನಿ, ಅಂಬಾನಿಗಳನ್ನು ಪೋಷಿಸುವುದಕ್ಕಾಗಿ ಶ್ರೀಸಾಮಾನ್ಯರ ಹಿತಾಸಕ್ತಿಗಳನ್ನು ಸರಕಾರ ಬಲಿಕೊಡುತ್ತಿದೆ. ಆದರೆ ಜನರು ಪ್ರತಿಭಟಿಸದಂತೆ ಅವರ ಗಮನವನ್ನು ಕೋಮು, ಧರ್ಮ, ಗೋವು ಇತ್ಯಾದಿಗಳ ಕಡೆಗೆ ತಿರುಗಿಸಲಾಗುತ್ತಿದೆ. ಜನರು ತಮ್ಮ ನಿಜವಾದ ಸಮಸ್ಯೆಗಳ ಕಡೆಗೆ ಗಮನ ಹರಿಸದಂತೆ ನೋಡಿಕೊಳ್ಳಬೇಕಾದರೆ ಆರೆಸ್ಸೆಸ್ ಮತ್ತು ಅಂಬಾನಿಗಳಿಗೆ ಹಿಂಸಾಚಾರ ಸದಾ ಜಾರಿಯಲ್ಲಿರಬೇಕಾಗಿದೆ. ಈ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತಾ ಬಂದಿರುವ ಹಿರಿಯ ಉದ್ಯಮಿಗಳು ಇವುಗಳ ವಿರುದ್ಧ ಧ್ವನಿಯೆತ್ತಿ, ಆರ್ಥಿಕ ಅಭಿವೃದ್ಧಿಯನ್ನು ಹಳಿಗೆ ತರಲು ಸರಕಾರಕ್ಕೆ ಒತ್ತಡ ಹೇರಬೇಕಾಗಿತ್ತು. ದುರದೃಷ್ಟವಶಾತ್, ಸರಕಾರವನ್ನು ಎದುರು ಹಾಕಿಕೊಳ್ಳುವ ಮೂಲಕ ತಮ್ಮ ಉದ್ದಿಮೆಗಳಿಗೆ ಇನ್ನಷ್ಟು ಹಾನಿ ಮಾಡಿಸಿಕೊಳ್ಳಲು ಅವರು ಸಿದ್ಧರಿದ್ದಂತಿಲ್ಲ.ಆದರೂ ಎಲ್ಲ ಒತ್ತಡಗಳ ನಡುವೆ ಇತ್ತೀಚೆಗೆ ಕೈಗಾರಿಕೋದ್ಯಮಿ ಆದಿ ಗೋದ್ರೇಜ್ ಕೆಲವು ಸತ್ಯಗಳನ್ನು ಸರಕಾರದ ಮುಂದಿಡಲು ಯತ್ನಿಸಿದ್ದು ಶ್ಲಾಘನೀಯವಾಗಿದೆ.

ಸಂತ ಕ್ಸೇವಿಯರ್ ಕಾಲೇಜಿನ 150ನೇ ಶತಮಾನೋತ್ಸವದ ಸಂದರ್ಭ ಆಯೋಜಿಸಲಾಗಿದ್ದ ನಾಯಕತ್ವ ಸಮ್ಮೇಳನದಲ್ಲಿ ಮಾತನಾಡಿದ ಆದಿ ಗೋದ್ರೇಜ್, ಭಾರತದಲ್ಲಿ ಇಂದು ವ್ಯಾಪಿಸಿರುವ ಪರಿಸ್ಥಿತಿಯನ್ನು ಕಟುವಾಗಿ ಟೀಕಿಸಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಸಾಮಾಜಿಕ ಅಸ್ಥಿರತೆ, ದ್ವೇಷಾಪರಾಧ, ಮಹಿಳೆಯರ ವಿರುದ್ಧ ಅಪರಾಧಗಳು, ನೈತಿಕ ಪೊಲೀಸ್‌ಗಿರಿ ಮತ್ತು ಧರ್ಮಾಧಾರಿತ ಹಿಂಸಾಚಾರ ಕಾರ್ಪೊರೇಟ್ ವಲಯವನ್ನು ಬಾಧಿಸುತ್ತಿವೆ ಎಂದಿರುವ ಅವರು, ಇದು ಆರ್ಥಿಕ ಬೆಳವಣಿಗೆಗೆ ಗಂಭೀರ ಹಾನಿಯೆಸಗಲಿವೆ ಎಂದು ಎಚ್ಚರಿಸಿದ್ದಾರೆ. ತನ್ನ ಭಾಷಣದಲ್ಲಿ ಗೋದ್ರೇಜ್, ದೇಶವನ್ನು ಈಗಲೂ ರೋಗದಂತೆ ಕಾಡುತ್ತಿರುವ ಬಡತನದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಹಿಂದೊಮ್ಮೆ, ಇದೇ ಗೋದ್ರೇಜ್, ಬೀಫ್ ವ್ಯಾಪಾರದ ಮೇಲೆ ವಿಧಿಸಲಾದ ಅಧಿಕೃತ ನಿಷೇಧದಿಂದ ಅದನ್ನೇ ಅವಲಂಬಿಸಿರುವ ಜನರ ಜೀವನದ ಮೇಲೆ ಉಂಟಾದ ದುಷ್ಪರಿಣಾಮದ ಕುರಿತು ಮಾತನಾಡಿದ್ದರು. ಲಾಭ ಕಾರ್ಪೊರೇಟ್ ಸಂಸ್ಥೆಗಳ ಗುರಿಯೇ ಆಗಿದ್ದರೂ, ಅದು ದೇಶದ ಅಭಿವೃದ್ಧಿಯೊಂದಿಗೆ, ಭವಿಷ್ಯದೊಂದಿಗೆ ಕೈ ಜೋಡಿಸಿದಾಗ ಮಾತ್ರ ‘ಅರ್ಥ’ ಪೂರ್ಣವಾಗುತ್ತದೆ. ಕಾರ್ಪೊರೇಟ್ ಉದ್ಯಮಿಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಮೂಲಕ ತನ್ನ ಹಿತಾಸಕ್ತಿಯನ್ನು ಸಾಧಿಸಲು ಮುಂದಾದರೆ, ಅದು ದೇಶಕ್ಕೆ ಯಾವ ರೀತಿಯಲ್ಲೂ ಹಿತವನ್ನು ಮಾಡಲಾರವು. ಆದಿ ಗೋದ್ರೇಜ್ ಅವರ ಮಾತುಗಳು ಈ ಸಂದೇಶವನ್ನು ಸರಕಾರಕ್ಕೆ ನೀಡಿವೆ. ಆದರೆ ಇದನ್ನು ಮೋದಿ ನೇತೃತ್ವದ ಸರಕಾರ ಯಾವ ರೀತಿಯಲ್ಲಿ ಸ್ವೀಕರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು ಅಥವಾ ದೇಶದ ಹಿತಕ್ಕೆ ಪೂರಕವಾಗಿ ನೀಡಿದ ಈ ಸಂದೇಶವೇ ಆದಿ ಗೋದ್ರೆಜ್ ಅವರಿಗೆ ದುಬಾರಿಯಾಗಲೂ ಬಹುದು. ಮುಂದೊಂದು ದಿನ ‘ಅರ್ಬನ್ ನಕ್ಸಲ್’ ಅಥವಾ ‘ಕಾರ್ಪೊರೇಟ್ ನಕ್ಸಲ್’ ಬಿರುದನ್ನು ಅವರ ತಲೆಗೂ ಕಟ್ಟಿ ಬಾಯಿ ಮುಚ್ಚಿಸುವ ಸಂದರ್ಭ ಬಂದರೆ ಅಚ್ಚರಿಯೇನೂ ಇಲ್ಲ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News