ಮಿಂಟೋ ಕಣ್ಣಿನ ಆಸ್ಪತ್ರೆ ಬಗ್ಗೆ ಯಾವುದೇ ಆತಂಕ ಬೇಡ: ನೇತ್ರಾಧಿಕಾರಿಗಳ ಸಂಘ

Update: 2019-07-18 18:50 GMT

ಬೆಂಗಳೂರು, ಜು.18: ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಯ ನಿರ್ಲಕ್ಷದಿಂದ 13 ಮಂದಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆಂದು ಸಾರ್ವಜನಿಕರು ಆಸ್ಪತ್ರೆಯ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ರಾಜ್ಯ ಸರಕಾರಿ ನೇತ್ರಾಧಿಕಾರಿಗಳ ಸಂಘ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ಸಂಘದ ಉಪಾಧ್ಯಕ್ಷ ಎಂ.ವೆಂಕಟೇಶ್, ಶಸ್ತ್ರಚಿಕಿತ್ಸೆ ನಡೆಸುವ ರೋಗಿಗಳಿಗೆ ಉಪಯೋಗಿಸಿದ ಔಷಧಿ (ಶೇ.2 ಅಕ್ಯೂಜೆಲ್)ಯಲ್ಲಿ ಸೋಂಕಿನಿಂದ ಕಣ್ಣುಗಳ ದೃಷ್ಟಿಗೆ ತೊಂದರೆಯಾಗಿರುತ್ತದೆ. ಕೂಡಲೇ ವೈದ್ಯರು ಈ ಔಷಧಿಗಳನ್ನು ಬೆಂಗಳೂರಿನ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ಅಲ್ಲದೆ, ರೋಗಿಗಳು ಗುಣಮುಖವಾಗಲು ಅಗತ್ಯ ಕ್ರಮಗಳನ್ನು ಜರುಗಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ಮೈಕ್ರೋಬಯೋಲಜಿ ವಿಭಾಗದಿಂದ ಹಾಗೂ ಪಿ.ಎಂ.ಎಸ್.ಎಸ್.ಐ ಆಸ್ಪತ್ರೆಯ ಪ್ರಯೋಗಾಲಯಗಳಿಂದ ಈ ಔಷಧಿಯಲ್ಲಿ ಸ್ಯೂಡೋಮೊನಾಸ್ ಎಂಬ ವೈರಾಣು ಪತ್ತೆಯಾಗಿದ್ದು, ಈ ಔಷಧಿ ಪಾಸಿಟೀವ್ ಎಂಬ ವರದಿ ಬಂದಿದೆ.

ಈಗಾಗಲೇ ಈ ಔಷಧ ವಿತರಕರ ವಿರುದ್ಧ ಸೂಕ್ತ ಕ್ರಮಜರುಗಿಸಲು ಹಾಗೂ ಈ ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲು ಆಸ್ಪತ್ರೆಯ ಅಧಿಕಾರಿಗಳು ಸರಕಾರ ಮತ್ತು ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿರುತ್ತಾರೆ ಹಾಗೂ ದೃಷ್ಟಿ ತೊಂದರೆಗಳಿಗೆ ಒಳಗಾದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯನ್ನು ವೈದ್ಯರುಗಳು ಅತೀ ಕಾಳಜಿಯಿಂದ ನೀಡುತ್ತಿದ್ದು ಬಹುತೇಕ ರೋಗಿಗಳು ಗುಣಮುಖರಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಕಳೆದ ಮಂಗಳವಾರ 23 ಮಂದಿಗೆ ಕಣ್ಣಿನ ಪೊರೆಯ ಚಿಕಿತ್ಸೆ ನಡೆಸಲಾಗಿತ್ತು, ಇದರಲ್ಲಿ ಐವರು ಮಹಿಳೆಯರು, ಎಂಟು ಮಂದಿ ಪುರುಷರು ಒಟ್ಟು 13 ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ. ದೃಷ್ಟಿ ಕಳೆದುಕೊಂಡಿರುವ 13 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಪ್ರತಿನಿತ್ಯ ಕಣ್ಣಿಗೆ ಔಷಧ, ಇಂಜೆಕ್ಷನ್ ಚುಚ್ಚುವುದು ನಡದೇ ಇದೆ, ಆದರೆ ಯಾವುದೇ ಫಲಿತಾಂಶ ಗೋಚರಿಸುತ್ತಿಲ್ಲವೆಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ಶಸ್ತ್ರ ಚಿಕಿತ್ಸೆಗೆ ಬಳಸಿದ್ದ ಅಕ್ಯೂಜೆಲ್ ಶೇ.2ರಷ್ಟು ಆಪ್ತಮಾಲಿಕ್ ವಿಸಿಯೋಸರ್ಜಿಕಲ್ ಡಿವೈಸ್ ಬ್ಯಾಚ್ ನಂ ಒಯುವಿ 19023 ಔಷಧವನ್ನು ವರದಿ ಬರುವವರೆಗೆ ಯಾವ ಶಸ್ತ್ರಚಿಕಿತ್ಸೆಗೂ ಬಳಸದಂತೆ ಸೂಚಿಸಲಾಗಿದೆ. ಇನ್ನು, ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದನ್ನು ನಿಲ್ಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ಕೊಠಡಿಗೆ ಬೀಗ ಜಡಿಯಲಾಗಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ವಿವಿಪುರಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News