ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ನರಮೇಧ ತಡೆಯಲು ಸಹಾಯ ಮಾಡಿ ಎಂದಿದ್ದಕ್ಕೆ ಟ್ರಂಪ್ ಪ್ರತಿಕ್ರಿಯೆ ಏನು ಗೊತ್ತೇ ?

Update: 2019-07-19 04:09 GMT

ವಾಷಿಂಗ್ಟನ್: ಯುಎಸ್ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ, ಟರ್ಕಿ, ಉತ್ತರ ಕೊರಿಯಾ, ಇರಾನ್ ಹಾಗೂ ಮ್ಯಾನ್ಮಾರ್ ಸೇರಿದಂತೆ ವಿವಿಧ ದೇಶಗಳಲ್ಲಿ ಧಾರ್ಮಿಕ ದಾಳಿಗೆ ಒಳಗಾದ ಸಂತ್ರಸ್ತರನ್ನು ಭೇಟಿ ಮಾಡಿದರು.

ಈ ಭೇಟಿ ವೇಳೆ ರೊಹಿಂಗ್ಯಾ ನಿರಾಶ್ರಿತರೊಬ್ಬರು ಟ್ರಂಪ್ ಅವರನ್ನು ಕುರಿತು ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ ನೆರವು ನೀಡಲು ನಿಮ್ಮ ಯೋಜನೆ ಏನು ಎಂದು ಪ್ರಶ್ನಿಸಿದರು.

ಇದಕ್ಕೆ ಟ್ರಂಪ್ ಪ್ರತಿಕ್ರಿಯಿಸಿದ್ದು: "ಅದು ವಾಸ್ತವವಾಗಿ ಎಲ್ಲಿದೆ ?"

ಈ ಕುರಿತ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟ್ರಂಪ್ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು "ಮ್ಯಾನ್ಮಾರ್, ಬರ್ಮಾ ಪಕ್ಕದಲ್ಲಿದೆ" ಎಂದು ಹೇಳಿದ್ದಾರೆ. ಆದರೆ ಅದು ಕೂಡಾ ನಿಜವಲ್ಲ; 1989ರವರೆಗೂ ಮ್ಯಾನ್ಮಾರ್ ದೇಶವನ್ನು ಬರ್ಮಾ ಎಂದು ಕರೆಯಲಾಗುತ್ತಿತ್ತು.

ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಹತ್ಯಾಕಾಂಡದಿಂದ ಪಾರಾಗಲು 2017ರ ಆಗಸ್ಟ್‌ನಿಂದೀಚೆಗೆ 7.30 ಲಕ್ಷ ಮಂದಿ ರೋಹಿಂಗ್ಯ ಮುಸ್ಲಿಮರು ರಖೀನ್ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ. ರೋಹಿಂಗ್ಯಾರನ್ನು ಒಕ್ಕಲೆಬ್ಬಿಸಲಾಗು ತ್ತಿದ್ದು, ಅವರ ವಿರುದ್ಧ ಮ್ಯಾನ್ಮಾರ್‌ನಲ್ಲಿ 1990ರ ದಶಕದಿಂದಲೂ ಹಿಂಸೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿ ಇರುವ ಹೈಕಮಿಷನ್ ಹೇಳಿದೆ. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಪರಿಗಣಿಸುವ ರೀತಿ ಹತ್ಯಾಕಾಂಡದ ಕುರುಹು ಎಂದು ವಿಶ್ವಸಂಸ್ಥೆ ಹೇಳಿದೆ.

ರೋಹಿಂಗ್ಯಾ ನಿರಾಶ್ರಿತರ ವಿರುದ್ಧದ ಹಿಂಸಾಚಾರದ ಹಿನ್ನೆಲೆಯಲ್ಲಿ ಮಂಗಳವಾರ ಟ್ರಂಪ್ ಅವರು ಮ್ಯಾನ್ಮಾರ್‌ನ ಸೇನಾ ಮಹಾದಂಡನಾಯಕ ಮಿನ್ ಆಂಗ್ ಲಿಯಾಂಗ್ ಮತ್ತು ಇತರ ಮೂವರ ಮೇಲೆ ನಿಷೇಧ ವಿಧಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News