ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾ

Update: 2019-07-19 06:26 GMT
Photo: cnn.com

ಲಾಗೊಸ್, ನೈಜೀರಿಯಾ, ಜು.19:  ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು  ಅಮೆರಿಕಾ ಸರಕಾರ ಗೌರವಿಸಿದೆ.

ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ  2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್ ನ್ಯಾಷನಲ್ ರಿಲಿಜಿಯಸ್ ಫ್ರೀಡಂ ಅವಾರ್ಡ್) ನೀಡಿ ಗೌರವಿಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಜೂನ್ 23, 2018ರಂದು ಬರ್ಕಿನ್ ಲಡಿ ಪ್ರದೇಶದಲ್ಲಿ 10 ಗ್ರಾಮಗಳ ಕ್ರೈಸ್ತ ಕೃಷಿಕರ ಮೇಲೆ ದನಕಾಯುವ ಮುಸ್ಲಿಮರು ನಡೆಸಿದ ಸಂಘಟಿತ ದಾಳಿಗಳಿಂದ ತಪ್ಪಿಸಿಕೊಂಡು  ಓಡಿದ ನೂರಾರು ಕ್ರೈಸ್ತರಿಗೆ ಅಬ್ದುಲ್ಲಾಹಿ ಆಶ್ರಯ ನೀಡಿದ್ದರು.

“ಈ ಕ್ರೈಸ್ತ ಮಂದಿ ಎಲ್ಲಿದ್ದಾರೆಂದು ದಾಳಿಕೋರರು ಅವರನ್ನು ಕೇಳಿದರೂ ಯಾವುದೇ ಮಾಹಿತಿಯನ್ನು ಅಬ್ದುಲ್ಲಾಹಿ ಹೊರಗೆಡಹಿರಲಿಲ್ಲ, ಅವರು ಧೈರ್ಯ, ಸಹೋದರತೆಯ ಭಾವ ಹಾಗೂ ನಿಸ್ವಾರ್ಥತೆಯಿಂದ ಈ ಸಹಾಯ ಮಾಡಿದ್ದರು'' ಎಂದು ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿ ಸ್ಯಾಮ್ ಬ್ರೌನ್ ಬ್ಯಾಕ್ ಹೇಳಿದರು.

ಕಳೆದ ವರ್ಷ ನಡೆದ ಈ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಬಲಿಯಾಗಿದ್ದರಲ್ಲದೆ, ದಾಳಿಕೋರರು ಹಲವಾರು ಮನೆಗಳಿಗೆ ಬೆಂಕಿ ಕೂಡ ಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News