Breaking News: 30 ಕೋಟಿ ರೂ. ಆಮಿಷ ಒಡ್ಡಿದ್ದರು, ಮನೆಗೆ ಬಂದು 5 ಕೋಟಿ ನೀಡಿದ್ದರು: ಶಾಸಕ ಶ್ರೀನಿವಾಸ್ ಗೌಡ ಆರೋಪ

Update: 2019-07-19 13:56 GMT

ಬೆಂಗಳೂರು, ಜು. 19: ಯಲಹಂಕ ಕ್ಷೇತ್ರದ ಎಸ್.ಆರ್.ವಿಶ್ವನಾಥ್, ಮಲ್ಲೇಶ್ವರಂ ಕ್ಷೇತ್ರದ ಡಾ.ಅಶ್ವಥ್ ನಾರಾಯಣ್ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ‘ನನ್ನ ಮನೆಗೆ ಬಂದು 5 ಕೋಟಿ ರೂ.ಹಣ ಕೊಟ್ಟು ಬಿಜೆಪಿಗೆ ಸೇರ್ಪಡೆಗೆ ಆಹ್ವಾನಿಸಿದ್ದರು’ ಎಂದು ಜೆಡಿಎಸ್ ಸದಸ್ಯ ಶ್ರೀನಿವಾಸಗೌಡ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಶ್ರೀನಿವಾಸಗೌಡ, ಶಾಸಕರಿಗೆ ಕೋಟಿ ಕೋಟಿ ರೂ.ಬೆಲೆ ಕಟ್ಟಿ ಹಸು-ಕುರಿಗಳಂತೆ ಖರೀದಿಗೆ ಮುಂದಾಗಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಮಾಧುಸ್ವಾಮಿ, ಈ ಬಗ್ಗೆ ಅವರು ದಾಖಲೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್-ಜೆಡಿಎಸ್‌ನ ಆಡಳಿತ ಪಕ್ಷದ ಸದಸ್ಯರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೃತ್ಯ ಸಹಿಸಲು ಸಾಧ್ಯವಿಲ್ಲ ಎಂದು ಏರಿದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಸಾ.ರಾ.ಮಹೇಶ್, ‘ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಅವರಿಗೆ 28 ಕೋಟಿ ರೂ. ಆಮಿಷವೊಡ್ಡಲಾಗಿದೆ. ಇದು ನನ್ನ ತಂದೆ-ತಾಯಿ, ಮಕ್ಕಳ ಆಣೆಗೂ ಸತ್ಯ. ಒಂದು ವೇಳೆ ಇದು ಅಸತ್ಯ ಎಂದು ಎಚ್.ವಿಶ್ವನಾಥ್ ನಿರೂಪಿಸಿದರೆ ನಾನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಿಳಿಬಟ್ಟೆ ಹಾಕುವುದಿಲ್ಲ. ಮತದಾರರ ಮನೆ ಬಾಗಿಲಿಗೆ ಹೋಗಿ ನಾನು ಕೈಮುಗಿದು ಮತ ಕೇಳುವುದಿಲ್ಲ. ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಗಮನ ಸೆಳೆದರು.

‘ಲೋಕಸಭಾ ಚುನಾವಣೆಗೆ ಮೊದಲು ಅಂದರೆ ನಾಲ್ಕು ತಿಂಗಳ ಹಿಂದೆ ವಿಶ್ವನಾಥ್, ವಿಪಕ್ಷಗಳಿಗೆ ಅಧಿಕಾರ ಹಿಡಿಯುವ ಕಾತುರ ಸಹಜ. ಆದರೆ, ಅದಕ್ಕಾಗಿ ವಾಮ ಮಾರ್ಗ ಸಲ್ಲ. ಸಂವಿಧಾನಾತ್ಮಕವಾಗಿ ಮೈತ್ರಿ ಸರಕಾರ ಆಡಳಿತದಲ್ಲಿದೆ. ಅದನ್ನು ಉರುಳಿಸುತ್ತಿರುವ ಪ್ರಯತ್ನಕ್ಕೆ ಕೈ ಹಾಕುತ್ತಿರುವುದು ಬಿಜೆಪಿಗೆ ಶೋಭೆ ತರುವುದಿಲ್ಲ. ಅದೇ ರೀತಿ ಕಪ್ಪುಹಣ ಉಪಯೋಗಿಸಬಾರದು’ ಎಂದಿದ್ದಾರೆಂದು ಉಲ್ಲೇಖಿಸಿದರು.

ನಾನು ಅಮೆರಿಕಾಗೆ ಹೋಗುವ ಮೊದಲು ಸಾ.ರಾ.ಮಹೇಶ್ ನಡವಳಿಕೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದರು. ಆಗ ನಾನು ಅವರನ್ನು ಕರೆಸಿ, ಏನ್ ಸರ್ ಸಚಿವ ಸ್ಥಾನದ ಆಸೆ ಇದೆಯೆ ಕೇಳಿದೆ. ಅದಕ್ಕೆ ಅವರು ಇಲ್ಲ, ಆದರೆ, ಚುನಾವಣೆಗೆ ಸಾಲ ಮಾಡಿದ್ದೇನೆ. ಸಮಸ್ಯೆಯಲ್ಲಿದ್ದೇನೆ ಎಂದಿದ್ದರು.

ಸಚಿವ ಕೃಷ್ಣಬೈರೇಗೌಡ, ರಾಜ್ಯದಲ್ಲಿ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಸದಸ್ಯರಾದ ಶ್ರೀನಿವಾಸಗೌಡ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಸದಸ್ಯರಾದ ಅಶ್ವಥ್ ನಾರಾಯಣ್, ಎಸ್.ಆರ್.ವಿಶ್ವನಾಥ್ ಹೆಸರು ಉಲ್ಲೇಖಿಸಿದ್ದು, ಅವರು ಉತ್ತರಿಸಬೇಕಿತ್ತು. ಈ ಆರೋಪದ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕಿತ್ತು. ಆದರೆ, ಅವರಿಬ್ಬರೂ ಮೌನ ವಹಿಸಿರುವುದನ್ನು ನೋಡಿದರೆ ಆಮಿಷವೊಡ್ಡಿರುವುದು ಸತ್ಯ. ಶಾಸಕರ ಖರೀದಿಗೆ ನೂರಾರು ಕೋಟಿ ರೂ.ಖರ್ಚು ಮಾಡಲಾಗುತ್ತಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

‘ಯಾರ್ಯಾರು ಎಷ್ಟೇಷ್ಟು ಬೆತ್ತಲೆಯಾಗಿದ್ದೀರಿ ಎಂದು ಎಲ್ಲವೂ ಕಡತಕ್ಕೆ ಹೋಗಲಿ. ದೇಶದ ಜನರಿಗೆ ಇದು ಅರ್ಥ ಮಾಡಿಕೊಳ್ಳಲಿ. ಎಲ್ಲರಿಗೂ ಮುಕ್ತ ಅವಕಾಶ ನೀಡುವೆ. ಶಾಂತವೇರಿ ಗೋಪಾಲಗೌಡ ಹುಟ್ಟಿದ ನೆಲದಲ್ಲಿ ಇಂತಹ ದಾರಿದ್ರ ತಲೆ ಹಾಕಿದ್ದು ಸರಿಯಲ್ಲ’

-ರಮೇಶ್‌ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News