‘ಆಪರೇಶ್ ಕಮಲ’ಕ್ಕೆ ಕಪ್ಪು ಹಣ ಬಳಸುತ್ತಿರುವ ಪ್ರಧಾನಿ ಮೋದಿ: ವಿಶ್ವನಾಥ್ ಹಳೆ ಹೇಳಿಕೆ ವರದಿ ವೈರಲ್

Update: 2019-07-20 06:28 GMT

ಬೆಂಗಳೂರು, ಜು.20: ಜೆಡಿಎಸ್ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಬಿಜೆಪಿ 28 ಕೋ.ರೂ. ಆಮಿಷ ಒಡ್ಡಿರುವ ಬಗ್ಗೆ ಸಚಿವ ಸಾ.ರಾ.ಮಹೇಶ್ ಆರೋಪ ಮಾಡಿರುವ ಬೆನ್ನಲ್ಲೇ ಈ ಹಿಂದೆ ಎಚ್.ವಿಶ್ವನಾಥ್ ಅವರು ಪ್ರಧಾನಿ ಮೋದಿ ವಿರುದ್ಧ ಮಾಡಿದ್ದ ಆರೋಪದ ಪತ್ರಿಕಾ ವರದಿಯೊಂದು ವೈರಲ್ ಆಗಿದೆ. ಸದ್ಯ ವಿಶ್ವನಾಥ್ ಅವರು  ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿರುವ ಶಾಸಕರ ಪಾಳಯದಲ್ಲಿದ್ದಾರೆ. 

ಎಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರಿಗೆ ಬಿಜೆಪಿಯು 28 ಕೋ.ರೂ.ನ ಆಮಿಷ ಒಡ್ಡಿತ್ತು ಎಂದು ಜೆಡಿಎಸ್ ಶಾಸಕರೂ  ಆಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶುಕ್ರವಾರ ಸದನದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಇದು ಸುಳ್ಳು ಎಂದು ನಿರೂಪಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ವಿಶ್ವನಾಥ್‌ಗೆ ಸವಾಲು ಹಾಕಿದ್ದಾರೆ. ಇವೆಲ್ಲದರ ನಡುವೆ ಈ ಹಿಂದೆ ‘‘ರಾಜ್ಯದಲ್ಲಿ ಆಪರೇಶನ್ ಕಮಲಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಕಪ್ಪು ಹಣವನ್ನು ಬಳಸಿಕೊಳ್ಳುತ್ತಿದ್ದಾರೆ’’ ಎಂದು ಎಚ್.ವಿಶ್ವನಾಥ್ ಆರೋಪಿಸಿದ್ದ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭ ಹಾವೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಎಚ್.ವಿಶ್ವನಾಥ್, ‘‘ಪ್ರಧಾನಿ ನರೇಂದ್ರ ಮೋದಿ ದೇಶದ ಕಪ್ಪು ಹಣವನ್ನು ಬಡವರ ಖಾತೆಗೆ ಹಾಕದೆ ರಾಜ್ಯದ ಆಪರೇಶನ್ ಕಮಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೇಂದ್ರ ಸರಕಾರದ ಯೋಜನೆಗಳು ಪ್ರಗತಿಯಲ್ಲಿ ಇವೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಆಪರೇಷನ್ ಕಮಲ ಮಾತ್ರ ಪ್ರಗತಿಯಲ್ಲಿದೆ’’ ಎಂದು ಲೇವಡಿ ಮಾಡಿದ್ದರು.

‘‘ಪ್ರತಿಪಕ್ಷಗಳಿಗೆ ಅಧಿಕಾರ ಹಿಡಿಯುವ ಕಾತರ ಇರುವುದು ಸಹಜ. ಆದರೆ ಇದಕ್ಕಾಗಿ ವಾಮಮಾರ್ಗ ಹಿಡಿಯುವುದು ಸರಿಯಲ್ಲ. ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಮೈತ್ರಿ ಸರಕಾರ ಆಡಳಿತದಲ್ಲಿದೆ. ಅದನ್ನು ಉರುಳಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿರುವುದು ಬಿಜಿಪಿಗೆ ಶೋಭೆ ತರುವುದಿಲ್ಲ’’ ಎಂದೂ ಎಚ್.ವಿಶ್ವನಾಥ್ ಹೇಳಿದ್ದರು. ಆದರೆ ಈಗ ಅವರ ವಿರುದ್ಧ ಬಿಜೆಪಿಯಿಂದ ಹಣ ಪಡೆದ ಆರೋಪ ಕೇಳಿಬಂದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News