ನಮ್ಮ ಪಕ್ಷಕ್ಕೆ ಬನ್ನಿ, 30 ಕೋಟಿ ರೂ. ಕೊಡುತ್ತೇವೆ: ರಾಜ್ಯ ಸಚಿವರೊಬ್ಬರಿಗೆ ಭರ್ಜರಿ ಆಫರ್ ಕರೆ ?

Update: 2019-07-20 12:28 GMT

ಬೆಂಗಳೂರು, ಜು.20: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮತದಾನದ ವೇಳೆ ಸೋಲಿಸಲು ಮುಂದಾಗಿರುವ ವಿಪಕ್ಷ ಬಿಜೆಪಿ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಮ್ ಖಾನ್‌ರನ್ನು ಆಪರೇಷನ್ ಕಮಲದ ಮೂಲಕ ಸೆಳೆಯಲು ಯತ್ನಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪಗೆ ಆಪ್ತರಾಗಿರುವ ಪಕ್ಷದ ಪ್ರಭಾವಿ ನಾಯಕಿಯೊಬ್ಬರು ಇಂದು ಬೆಳಗ್ಗೆ ರಹೀಮ್ ಖಾನ್‌ಗೆ ದೂರವಾಣಿ ಕರೆ ಮಾಡಿ, ನಮ್ಮ ಪಕ್ಷಕ್ಕೆ ಬಂದರೆ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ. ಅಲ್ಲದೆ, 30 ಕೋಟಿ ರೂ.ಗಳನ್ನು ಕೊಡುತ್ತೇವೆ ಎಂದು ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಲಿರುವ ಬಿಜೆಪಿ ಸರಕಾರದಲ್ಲಿ ಸಚಿವರಾಗುತ್ತೀರಾ. ಅಲ್ಲದೇ, ಉತ್ತರ ಕರ್ನಾಟಕ ಭಾಗದಲ್ಲಿ ಒಬ್ಬ ಪ್ರಭಾವಿ ಮುಸ್ಲಿಮ್ ನಾಯಕರನ್ನಾಗಿ ನಾವು ನಿಮ್ಮನ್ನು ಬೆಳೆಸುತ್ತೇವೆ. ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದು ಆ ನಾಯಕಿ ರಹೀಮ್ ಖಾನ್‌ಗೆ ಕರೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಹೀಮ್ ಖಾನ್ ಜೊತೆ ಮಾತನಾಡಿಲ್ಲ: ರಹೀಮ್ ಖಾನ್ ಹಾಗೂ ಬಿಜೆಪಿ, ಶೋಭಾ ಕರಂದ್ಲಾಜೆಗೆ ಏನು ಸಂಬಂಧ. ಈಶ್ವರ್ ಖಂಡ್ರೆ ಒಂದು ಪಕ್ಷದ ಕಾರ್ಯಾಧ್ಯಕ್ಷರು, ಸತ್ಯಾಸತ್ಯತೆ ಅರಿತು, ನಾಲಗೆ ಬಿಗಿ ಹಿಡಿದು ಮಾತನಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಹೀಮ್ ಖಾನ್‌ಗೆ ಯಾರು ಕರೆ ಮಾಡಿದ್ದಾರೆ ಎಂಬುದನ್ನು ಗುಪ್ತಚರ ವಿಭಾಗದ ಮೂಲಕ ತಿಳಿದುಕೊಳ್ಳಲಿ, ಸುಳ್ಳಿನ ಕಂತೆಯನ್ನು ಕಟ್ಟಿ ಕಾಂಗ್ರೆಸ್‌ನವರು ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.

ಯಾವ ಸತ್ಯದ ಆಧಾರದಲ್ಲಿ ಈ ಆರೋಪ ಮಾಡಲಾಗುತ್ತಿದೆ. ಕುಮಾರಸ್ವಾಮಿ ಸರಕಾರವು ಎಲ್ಲರ ಫೋನ್ ಕದ್ದಾಲಿಕೆ ಮಾಡುತ್ತಿದೆ. ರಹೀಮ್ ಖಾನ್ ಬಳಿ ಕೇಳಿ, ಶೋಭಾ ಕರಂದ್ಲಾಜೆ ಜೊತೆ ಯಾವತ್ತಾದರೂ ಮಾತನಾಡಿದ್ದಾರಾ? ಬಿಜೆಪಿಗೆ ಯಾವ ರಹೀಮ್ ಖಾನ್ ಅಗತ್ಯವಿಲ್ಲ ಎಂದು ಅವರು ಹೇಳಿದರು.

ರಹೀಂ ಖಾನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News