ಐಎಂಎ ವಂಚನೆ ಪ್ರಕರಣ: ಜು.23ರ ವರೆಗೆ ಮನ್ಸೂರ್ ಖಾನ್ ಈ.ಡಿ. ಕಸ್ಟಡಿಗೆ

Update: 2019-07-20 16:04 GMT

ಬೆಂಗಳೂರು, ಜು.20: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬಂಧಿತನಾಗಿರುವ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯ(ಈ.ಡಿ.) ಶನಿವಾರ ಕಸ್ಟಡಿಗೆ ಪಡೆದಿದೆ.

ಆರೋಪಿಯನ್ನು ಈ.ಡಿ. ಅಧಿಕಾರಿಗಳು ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೇ 23ರ ವರೆಗೆ ಈ.ಡಿ. ಕಸ್ಟಡಿಗೆ ನೀಡಲು ಆದೇಶಿಸಲಾಯಿತು.

ಶನಿವಾರ ಬೆಳಗ್ಗೆ ನಗರಕ್ಕೆ ಕರೆತಂದ ಈ.ಡಿ ಅಧಿಕಾರಿಗಳು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಲ್ಲಿಂದ ಶಾಂತಿನಗರದ ಈ.ಡಿ. ಕಚೇರಿಗೆ ಕರೆತಂದು ಮನ್ಸೂರ್‌ನನ್ನು ವಿಚಾರಣೆಗೊಳ ಪಡಿಸಲಾಯಿತು.

ವಾದ: ವಿಶೇಷ ತನಿಖಾ ತಂಡ(ಎಸ್‌ಐಟಿ) ಮತ್ತು ತೆಲಂಗಾಣ ಪೊಲೀಸರು, ತಮ್ಮ ವಶಕ್ಕೆ ಮನ್ಸೂರ್ ಅನ್ನು ನೀಡಬೇಕೆಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿ, ಮನವಿ ಸಲ್ಲಿಸಿತು.

ಐಎಂಎ ವಂಚನೆ ಪ್ರಕರಣ ಸಂಬಂಧ ಈಗಾಗಲೇ ಹಲವು ಮಂದಿಯನ್ನು ಬಂಧಿಸಿ, ಅಪಾರ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಹಾಗಾಗಿ, ಮೊದಲು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಸಿಟ್ ಪರ ವಕೀಲರು ವಾದ ಮಂಡಿಸಿದರು ಎನ್ನಲಾಗಿದೆ. ಆದರೆ, ನ್ಯಾಯಾಲಯವು ಈ.ಡಿ.ಗೆ ಒಪ್ಪಿಸಿತು ಎಂದು ತಿಳಿದುಬಂದಿದೆ.

ಮನ್ಸೂರ್ ನೋಡಲು ಬಂದ ಜನಸಾಗರ

ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್‌ನನ್ನು ನೋಡಲು, ಹೂಡಿಕೆದಾರರು ಸಾಗರದಂತೆ ಹರಿಬಂದ ದೃಶ್ಯ ಕಂಡಿತು. ಇಲ್ಲಿನ 1ನೆ ಸಿಸಿಎಚ್ ಕೋರ್ಟ್ ಮುಂದೆ ಹೂಡಿಕೆದಾರರು ಕಿಕ್ಕಿರಿದು ಸೇರಿದ್ದರು. ಶನಿವಾರ ಬೆಳಗ್ಗೆ ಈ.ಡಿ. ಅಧಿಕಾರಿಗಳು, ಹೊಸದಿಲ್ಲಿಯಿಂದ ಮನ್ಸೂರ್ ಖಾನ್‌ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

ಸಿಎಂ ವಿಚಾರಣೆಗೆ ರಾಜ್ಯಪಾಲರಿಗೆ ಮನವಿ

ಐಎಂಎ ವಂಚನೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆ ಸಿಟ್ ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ಕೋರಿ ಹೈಕೋರ್ಟ್ ವಕೀಲರಿಬ್ಬರು, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು ಎಂದು ಹೇಳಲಾಗುತ್ತಿದೆ. ವಕೀಲರಾದ ಟಿ.ಸಿ.ನಾಯ್ಕಿ ಹಾಗೂ ಎ.ವಿ.ಹಿರೇಮಠ್ ಅವರು ಮನವಿ ಸಲ್ಲಿಸಿದ್ದಾರೆ.

ಬಿಗಿ ಬಂದೋಬಸ್ತ್: ಆರೋಪಿ ಮನ್ಸೂರ್ ಖಾನ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಹಾಗೂ ಶಾಂತಿನಗರದ ಈ.ಡಿ. ಕಚೇರಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರತಿಭಟನೆ: ಬಂಧಿತ ಆರೋಪಿಯನ್ನು ಪೊಲೀಸ್ ವಶಕ್ಕೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಐಎಂಎ ಕಂಪೆನಿ ಹೂಡಿಕೆದಾರರು ಶಾಂತಿನಗರದ ಈ.ಡಿ. ಕಚೇರಿ ಮುಂಭಾಗ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News