'ಮೋದಿ ಭಕ್ತ’ ಫೇಸ್‌ಬುಕ್ ಪೇಜ್ ಮುಖ್ಯಸ್ಥನ ವಿರುದ್ಧ ದೂರು ನೀಡಿದ ಬಿಬಿಎಂಪಿ ಮೇಯರ್

Update: 2019-07-20 15:05 GMT

ಬೆಂಗಳೂರು, ಜು.20: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು ಬಿಡುವುದಿಲ್ಲ ಎಂದು ಸುಳ್ಳು ಮತ್ತು ಅವಹೇಳನಕಾರಿ ಸಂದೇಶಗಳನ್ನು ಹರಿಬಿಟ್ಟಿರುವ ಆರೋಪದಡಿ ‘ಮೋದಿ ಭಕ್ತ’ ಫೇಸ್‌ಬುಕ್ ಪುಟದ ಮುಖ್ಯಸ್ಥನ ವಿರುದ್ಧ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಪೊಲೀಸರಿಗೆ ದೂರು ಸಲ್ಲಿಸಿದರು. 

ಶನಿವಾರ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ದೂರು ಸಲ್ಲಿಸಿದ ಮೇಯರ್, ಕಿಡಿಗೇಡಿಗಳು ಉದ್ದೇಶ ಪೂರಕವಾಗಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಏನಿದು ಸುಳ್ಳು?: ಬೆಂಗಳೂರಿನ ಮೇಯರ್ ಈ ಬಾರಿ ಹಿಂದುಗಳಿಗೆ ಗಣೇಶ ಮೂರ್ತಿಯನ್ನು ರಸ್ತೆಗಳಲ್ಲಿ ಪ್ರತಿಷ್ಠಾಪಿಸಲು ಬಿಡುವುದಿಲ್ಲವೆಂದು ‘ಮೋದಿ ಭಕ್ತ’ ಎಂಬ ಫೇಸ್‌ಬುಕ್ ಪುಟದಲ್ಲಿ ಅಸತ್ಯ ಮತ್ತು ಅಸಭ್ಯ ಭಾಷೆಯ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ರೀತಿಯ ಸಂದೇಶವನ್ನು ಅನೇಕರು ಹಂಚಿಕೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಮಣಿಕಂಠ ಭಾರದ್ವಾಜ್ ಎಂಬಾತ, ಬಿಬಿಎಂಪಿ ಮೇಯರ್ ಕುರಿತು ಅಸಭ್ಯ ವಾಕ್ಯಗಳಲ್ಲಿ ಟೀಕಿಸಿ ಬರೆದಿದ್ದಾನೆ. ಈ ಸಂಬಂಧ ದೂರು ನೀಡಲಾಗಿದೆ.

ಎಫ್‌ಐಆರ್ ದಾಖಲು: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ನೀಡಿದ ದೂರಿನ್ವಯ ಇಲ್ಲಿನ ಸಿದ್ದಪುರ ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಐಪಿಸಿ 153 ಎ,(ಕೋಮುದ್ವೇಷ ಹಬ್ಬಿಸುವ ಯತ್ನ), 505 (2)(ಜನರ ನಡುವೆ ದ್ವೇಷ ಹಚ್ಚುವ ಯತ್ನ) ಅಡಿ ಮೊಕದ್ದಮೆ ದಾಖಲು ಮಾಡಿ, ಶೋಧ ಕಾರ್ಯ ಮುಂದುವರೆಸಲಾಗಿದೆ.

‘ಹಿಂದುವಾಗಿ ಹುಟ್ಟಿರುವ ನನಗೆ ಆಸ್ತಿಕ ನಂಬಿಕೆ’

ಹಿಂದುವಾಗಿ ಹುಟ್ಟಿರುವ ನನಗೆ ನನ್ನ ಧಾರ್ಮಿಕ ಆಚರಣೆಗಳ ಮೇಲೆ ಆಸ್ತಿಕ ನಂಬಿಕೆಯಿದ್ದು, ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಹೇಳಿದರು.

ಈ ಬಾರಿ ಬೆಂಗಳೂರಿನ ರಸ್ತೆಗಳಲ್ಲಿ ಗಣಪತಿ ಮೂರ್ತಿ ಯನ್ನು ಪ್ರತಿಷ್ಠಾಪಿಸಲು ಬಿಡುವುದಿಲ್ಲ ಎಂದು ಸುಳ್ಳು ವದಂತಿಗಳನ್ನು ಹರಿಬಿಡಲಾಗಿದೆ. ಆದರೆ,  ನಾನೂ ಸಹ ಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇನೆ ಎಂದಿದ್ದಾರೆ.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೂರು ದಿನಕ್ಕೆ ಸೀಮಿತವಾಗಿ ಆಚರಿಸುತ್ತಿದ್ದ ಗಣೇಶ ಉತ್ಸವವನ್ನು ಇದೇ ಮೊದಲ ಬಾರಿಗೆ ಹನ್ನೊಂದು ದಿನ ಆಚರಿಸಲು ಅನುವು ಮಾಡಿಕೊಟ್ಟಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ, ಕೀಳುಮಟ್ಟದ ಪ್ರಚಾರಕ್ಕಾಗಿ ಹೆಣ್ಣಿನ ಬಗ್ಗೆ ಏಕವಚನವನ್ನು ಬಳಸಿ ಇಲ್ಲಸಲ್ಲದ ಆರೋಪ ಮಾಡುವ ನಿಮ್ಮಂತವರು ಹಿಂದೂ ಧರ್ಮದಲ್ಲಿ ಹುಟ್ಟಿರುವುದು ಹಿಂದೂ ಧರ್ಮಕ್ಕೆ ಕಳಂಕ. ಮಾಡಿದ ತಪ್ಪನ್ನು ತಕ್ಷಣ ಒಪ್ಪಿಕೊಂಡು ಸಂದೇಶ ಅಳಿಸಿ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News