ಅಸ್ಸಾಂ: 25 ಲಕ್ಷ ಜನರಿಂದ ಕರಡು ಎನ್‌ಆರ್‌ಸಿ ಮರುಪರಿಶೀಲನೆಗೆ ಕೋರಿಕೆ

Update: 2019-07-20 13:58 GMT

ಹೊಸದಿಲ್ಲಿ,ಜು.20: ಅಸ್ಸಾಂನಲ್ಲಿ ಕರಡು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯಿಂದ ಸುಮಾರು 41 ಲಕ್ಷ ಜನರನ್ನು ಕೈಬಿಟ್ಟ ನಂತರ ಸುಮಾರು 25 ಲಕ್ಷ ಜನರು ಮರುಪರಿಶೀಲನೆಯನ್ನು ಕೋರಿ ಕೇಂದ್ರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು,ಅದೀಗ ಕೇಂದ್ರ ಗೃಹ ಸಚಿವಾಲಯದ ಪರಿಶೀಲನೆಯಲ್ಲಿದೆ.

ಎನ್‌ಆರ್‌ಸಿಯಿಂದ ಹಲವಾರು ಅರ್ಹ ಹೆಸರುಗಳು ಹೊರಗುಳಿದಿವೆ ಮತ್ತು ಹಲವಾರು ಬೋಗಸ್ ಹೆಸರುಗಳು ದಾಖಲಾಗಿವೆ ಎಂದು ಗೃಹ ಸಚಿವಾಲಯದಲ್ಲಿನ ಉನ್ನತ ಮೂಲಗಳು ತಿಳಿಸಿವೆ.

ಗೃಹ ಸಚಿವಾಲಯವು ಎನ್‌ಆರ್‌ಸಿ ವಿರುದ್ಧ ತಮ್ಮ ಹಕ್ಕುಕೋರಿಕೆಗಳು ಮತ್ತು ಆಕ್ಷೇಪಗಳಿಗೆ ಉತ್ತರದಿಂದ ತೃಪ್ತರಾಗದ ಜನರು ಸಲ್ಲಿಸಿರುವ ಮೇಲ್ಮನವಿಗಳನ್ನು ಇತ್ಯರ್ಥಗೊಳಿಸಲು ಅಸ್ಸಾಮಿನಲ್ಲಿರುವ ವಿದೇಶಿಯರ ನ್ಯಾಯಾಧಿಕರಣಗಳಿಗೆ ವಿಧಿವಿಧಾನಗಳನ್ನು ನಿಗದಿಗೊಳಿಸಿದೆ.

ಸಚಿವಾಲಯವು ಕಳೆದ ಮೇ ತಿಂಗಳಿನಲ್ಲಿ ಎನ್‌ಆರ್‌ಸಿಯ ಅಂತಿಮ ಪಟ್ಟಿಯಿಂದ ಹೊರಗಿಡಬಹುದಾದ ಜನರಿಗೆ ಸಂಬಂಧಿಸಿದ ಯಾವುದೇ ಪ್ರಕರಣದ ತೀರ್ಪನ್ನು ನಾಲ್ಕು ತಿಂಗಳುಗಳಲ್ಲಿ ನೀಡುವಂತೆ ವಿದೇಶಿಯರ ನ್ಯಾಯಾಧಿಕರಣಗಳಿಗೆ ಆದೇಶವನ್ನು ಹೊರಡಿಸಿತ್ತು ಎಂದು ಈ ಮೂಲಗಳು ತಿಳಿಸಿದವು.

2018 ಜುಲೈನಲ್ಲಿ ಮತ್ತು ಈ ವರ್ಷದ ಜೂನ್‌ನಲ್ಲಿ ಪ್ರಕಟಿಸಲಾದ ಕರಡು ಪಟ್ಟಿಗಳಿಂದ ಸುಮಾರು 41 ಲಕ್ಷ ಜನರನ್ನು ಹೊರಗಿಡಲಾಗಿದೆ. ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆದುಹಾಕಿರುವುದರ ವಿರುದ್ಧ ಸುಮಾರು 36 ಲಕ್ಷ.ಜನರು ಹಕ್ಕುಕೋರಿಕೆಗಳನ್ನು ಸಲ್ಲಿಸಿದ್ದು,ಎರಡು ಲಕ್ಷ ಹೆಸರುಗಳ ಸೇರ್ಪಡೆಯ ವಿರುದ್ಧ ಆಕ್ಷೇಪಗಳನ್ನು ಸಲ್ಲಿಸಲಾಗಿದೆ. ಇವುಗಳ ವಿಚಾರಣೆಯು ವಿವಿಧ ಎನ್‌ಆರ್‌ಸಿ ಕೇಂದ್ರಗಳಲ್ಲಿ ನಡೆಯುತ್ತಿದೆ.

ಸರಕಾರದ ನಿರ್ಣಯದಂತೆ ಈ ಪ್ರಕ್ರಿಯೆಯಡಿ ಅಕ್ರಮ ವಲಸಿಗರೆಂದು ಗುರುತಿಸಲ್ಪಟ್ಟ ಎಲ್ಲರನ್ನೂ ಅವರ ಸ್ವದೇಶಗಳಿಗೆ ಗಡಿಪಾರು ಮಾಡಬೇಕಿದೆ.

ಭಾರತವು ವಿಶ್ವದ ‘ನಿರಾಶ್ರಿತರ ರಾಜಧಾನಿ’ಯಾಗಲು ಸಾಧ್ಯವಿಲ್ಲ ಎಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿರುವ ಸರಕಾರವು,ಎನ್‌ಆರ್‌ಸಿ ಕರಡು ಪಟ್ಟಿಯಲ್ಲಿ ಸೇರ್ಪಡೆ ಮತ್ತು ಹೊರಗಿಡುವಿಕೆಯನ್ನು ಮರುಪರಿಶೀಲಿಸಲು ಹೆಚ್ಚಿನ ಸಮಯಾವಕಾಶವನ್ನು ಕೋರಿದೆ.

ಅಸ್ಸಾಮಿನಲ್ಲಿ 1951ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿದ್ದ ಎನ್‌ಆರ್‌ಸಿಯನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 1975,ಮಾ.25ರ ಬಳಿಕ ಬಾಂಗ್ಲಾದೇಶದಿಂದ ರಾಜ್ಯವನ್ನು ಪ್ರವೇಶಿಸಿದವರಿಂದ ಅಸ್ಸಾಮಿನಲ್ಲಿ ವಾಸವಿರುವ ಭಾರತೀಯ ಪ್ರಜೆಗಳನ್ನು ಪ್ರತ್ಯೇಕಿಸಲು ಪರಿಷ್ಕರಿಸಲಾಗುತ್ತಿದೆ.

ಎನ್‌ಆರ್‌ಸಿ ಪ್ರಕ್ರಿಯೆಯಡಿ ಗುರುತಿಸಲ್ಪಟ್ಟ ಎಲ್ಲ ಅಕ್ರಮ ವಲಸಿಗರನ್ನು ಗಡಿಪಾರುಗೊಳಿಸಲು ಸರಕಾರವು ನಿರ್ಣಯಿಸಿದೆಯಾದರೂ ಬಾಂಗ್ಲಾದೇಶಕ್ಕೆ ಲಕ್ಷಾಂತರ ಜನರನ್ನು ಹೇಗೆ ಮರಳಿ ಕಳುಹಿಸಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ತನ್ನ ಪ್ರಜೆಗಳಾರೂ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿಲ್ಲ ಎಂದು ಬಾಂಗ್ಲಾದೇಶವು ಲಾಗಾಯ್ತಿನಿಂದಲೂ ಪ್ರತಿಪಾದಿಸುತ್ತಿದೆ.

ಈ ಅಕ್ರಮ ವಲಸಿಗರನ್ನು ಮೊದಲು ಅಸ್ಸಾಮಿನಲ್ಲಿರುವ ಬಂಧನ ಶಿಬಿರಗಳಲ್ಲಿ ಇಡುವ ಸಾಧ್ಯತೆಗಳು ದಟ್ಟವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News