ಬೆಂಗಳೂರು: ಸಂಚಾರಿ ಪರಿಷ್ಕೃತ ದಂಡ ಹೆಚ್ಚಳ ನಿಯಮ ಖಂಡಿಸಿ ಪ್ರತಿಭಟನೆ

Update: 2019-07-20 14:26 GMT

ಬೆಂಗಳೂರು, ಜು.20: ರಾಜ್ಯ ಸರಕಾರ ಇಂದಿನಿಂದ(ಜು.20) ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಪರಿಷ್ಕೃತ ದಂಡವು ಅವೈಜ್ಞಾನಿಕವಾಗಿದ್ದು, ಕೂಡಲೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಆಟೋರಿಕ್ಷಾ ಡ್ರೈವರ್ಸ್‌ ಯೂನಿಯನ್ ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿತು.

ರಸ್ತೆ ಸುಧಾರಣೆಗಳು, ಪಾರ್ಕಿಂಗ್ ವ್ಯವಸ್ಥೆ ಸುದಾರಣೆಯಾಗದ ಹೊರತು ಸಂಚಾರ ಉಲ್ಲಂಘನೆಯ ದಂಡವನ್ನು ಹೆಚ್ಚಿಸಬಾರದು. ಕೇವಲ ಕಂಪೆನಿಗಳ ಲಾಭಗಳಿಕೆಗಾಗಿ ಹಗಲಿರುಳು ಶ್ರಮಿಸುವ ಚಾಲಕರ ಜೇಬಿಗೆ ಕತ್ತರಿ ಹಾಕುವಂತಹ ಕೆಲಸವನ್ನು ರಾಜ್ಯ ಸರಕಾರ ಮಾಡ ಹೊರಟಿರುವುದು ಸರಿಯಾದ ಕ್ರಮವಲ್ಲವೆಂದು ಆಟೋ ಚಾಲಕರ ಯೂನಿಯನ್ ಮುಖಂಡ ಬಸವರಾಜು ತಿಳಿಸಿದರು.

ನಗರದಲ್ಲಿ 80 ಲಕ್ಷಕ್ಕೂ ಹೆಚ್ಚು ವಾಹನಗಳು ದಿನನಿತ್ಯ ಸಂಚರಿಸುತ್ತಿದ್ದು, ಒಂದು ಗಂಟೆಗೆ ಒಂದೂವರೆ ಕಿ.ಮೀ. ಚಾಲನೆ ಮಾಡಲು ಆಗಲ್ಲ. ಆಟೋ ಡ್ರೈವರ್ ದಿನಕ್ಕೆ ಒಂದು ಸಾವಿರ ದುಡಿಯುವುದು ಕಷ್ಟ. ಒಂದು ಸಿಗ್ನಲ್ ಜಂಪ್‌ಗೆ ಒಂದು ಸಾವಿರ ದಂಡ ಕಟ್ಟಬೇಕೆಂಬ ನಿಯಮ ಜಾರಿಗೆ ಬಂದರೆ, ಸಾಮಾನ್ಯ ಜನತೆ ಆಟೋ ಓಡಿಸಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆಯೆ ಎಂಬುದನ್ನು ಸರಕಾರವೆ ಚಿಂತಿಸಲಿ ಎಂದು ಅವರು ಹೇಳಿದರು.

ಸರಕಾರ ಸಂಚಾರ ಉಲ್ಲಂಘನೆಯ ದಂಡ ಪರಿಷ್ಕರಣೆ ನಿಯಮವನ್ನು ಜಾರಿಗೆ ತರುವ ಮೊದಲು ಆಟೋ ಚಾಲಕರ ಸಂಘಗಳು, ಸಾರಿಗೆ ಸಂಘಟನೆಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿ ಜಾರಿ ಮಾಡಲಾಗಿದೆ. ಇದು ಸರಕಾರದ ಜನವಿರೋಧಿ ಕ್ರಮವಾಗಿದೆ. ಕೂಡಲೆ ಪರಿಷ್ಕರಣೆಗೊಂಡ ದಂಡ ಹೆಚ್ಚಳ ನಿಯಮವನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು.

ಆಟೋ ಚಾಲಕರ ಸಂಘಟನೆಯ ಬಿ.ಎನ್.ರಘು, ರಾಜಶೇಖರಮೂರ್ತಿ, ಜಾವೀದ್ ನವಿಶ್ ಶೆಣೈ ಸೇರಿದಂತೆ ನೂರಾರು ಮಂದಿ ಆಟೋ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News