40 ಮೆಟ್ರಿಕ್ ಟನ್ ಆದಿರು ಉತ್ಪಾದನೆ ಗುರಿ: ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಪ್ರಸನ್ನ ಕುಮಾರ್

Update: 2019-07-20 14:31 GMT

ಬೆಂಗಳೂರು, ಜು.20: ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 40 ಮೆಟ್ರಿಕ್ ಟನ್ ಅದಿರು ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಎನ್.ಎಸ್. ಪ್ರಸನ್ನ ಕುಮಾರ್ ತಿಳಿಸಿದರು.

ಶನಿವಾರ ನಗರದ ಅಂಬೇಡ್ಕರ್ ವೀದಿಯ ಭಾರತೀಯ ಗಣಿ ಎಂಜಿನಿಯರ್‌ಗಳ ಸಂಘ ಸಭಾಂಗಣದಲ್ಲಿ ಏರ್ಪಡಿಸಿದ್ದ, ‘ಖನಿಜಗಳ ಗಣಿಗಾರಿಕೆ- 2020ರ ಆಚೆಗೆ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ 14 ಗಣಿ ಕೋರೆಗಳನ್ನು ಗುತ್ತಿಗೆ ನೀಡಲಾಗಿದ್ದು, ಈ ಪೈಕಿ ನಾಲ್ಕರಲ್ಲಿ ಈಗಾಗಲೇ ಗಣಿಗಾರಿಕೆ ಆರಂಭವಾಗಿದೆ. ಆಗಸ್ಟ್ ಅಂತ್ಯಕ್ಕೆ ಇನ್ನುಳಿದ ಹತ್ತರಲ್ಲಿ ಕಾರ್ಯಾರಂಭ ಆಗಲಿದೆ. ಹಾಗಾಗಿ, ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 40 ಮೆಟ್ರಿಕ್ ಟನ್ ಅದಿರು ಉತ್ಪಾದನೆ ಆಗಲಿದೆ ಎಂದು ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕೆ (ಗಣಿ) ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರರಾವ್ ಮಾತನಾಡಿ, 2020ರ ನಂತರ ಕೆಲ ಗಣಿ ಗುತ್ತಿಗೆ ಅವಧಿ ಪೂರ್ಣಗೊಳ್ಳಲಿದೆ. ಇದರಿಂದ ಅದಿರು ಉತ್ಪಾದನೆ ಕುಂಠಿತಗೊಂಡು, ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಆಗಲಿದೆ. ಪರಿಣಾಮ ಬೆಲೆ ಏರಿಕೆ ಆಗಲಿದೆ ಎಂಬ ಆತಂಕ ಇದೆ. ಆದರೆ, ಈ ಬಗ್ಗೆ ಆತಂಕ ಬೇಡ. ಸರಕಾರ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ಭೂವಿಜ್ಞಾನ ಸೊಸೈಟಿ ಕಾರ್ಯದರ್ಶಿ ಆರ್.ಎಚ್. ಸಾವಕಾರ ಮಾತನಾಡಿ, ಗಣಿಗಾರಿಕೆಗೆ ಗುತ್ತಿಗೆ ನೀಡುವ ಮೊದಲೇ ಸ್ಥಳೀಯ ಅಭಿಪ್ರಾಯ ಸಂಗ್ರಹ, ಪರಿಸರ ಮತ್ತು ಅರಣ್ಯ ಸೇರಿದಂತೆ ಅಗತ್ಯ ಅನುಮತಿಗಳನ್ನು ಪಡೆದು, ತ್ವರಿತಗತಿಯಲ್ಲಿ ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಡಾ.ಟಿ.ಎನ್.ವೇಣುಗೋಪಲ್, ಕೆ.ಮಧುಸೂದನ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News