ನನ್ನ ಪೂರ್ವಜರು ಋಷಿಗಳಲ್ಲ: ಕೇಂದ್ರ ಸಚಿವಗೆ ಕನಿಮೋಳಿ ತಿರುಗೇಟು

Update: 2019-07-20 15:21 GMT

ಹೊಸದಿಲ್ಲಿ,ಜು.20: ಬಿಜೆಪಿ ಸಂಸದ ಸತ್ಯಪಾಲ ಸಿಂಗ್ ಅವರು ಶುಕ್ರವಾರ ಸಂಸತ್ತಿನಲ್ಲಿ ಡಾರ್ವಿನ್‌ನ ವಿಕಾಸವಾದವು ತಪ್ಪು ಎಂದು ಸಾಬೀತುಗೊಳಿಸಲು ಪ್ರಯತ್ನಿಸಿದ್ದು ಮಾನವ ಹಕ್ಕುಗಳ ರಕ್ಷಣೆ (ತಿದ್ದುಪಡಿಗಳು)ಮಸೂದೆ,2019ರ ಮೇಲಿನ ಚರ್ಚೆಗೆ ವಿಲಕ್ಷಣ ತಿರುವನ್ನು ನೀಡಿತ್ತು. ‘ಮಂಗನಿಂದ ಮಾನವ ’ಸಿದ್ಧಾಂತವನ್ನು ತಿರಸ್ಕರಿಸಿದ ಸಿಂಗ್ ಬದಲಿಗೆ ಸಂಸ್ಕೃತಿಯಾಧಾರಿತ ತನ್ನದೇ ಕಲ್ಪನೆಯನ್ನು ಸದನದ ಮುಂದಿಟ್ಟಿದ್ದರು.

“ನಾವು ಋಷಿಮುನಿಗಳ ಸಂತತಿಯೆಂದು ನಮ್ಮ ಸಂಸ್ಕೃತಿಯು ಹೇಳುತ್ತದೆ. ನಾವು ಮಂಗನ ಸಂತತಿಯೆಂದು ನಂಬುವವರನ್ನು ಟೀಕಿಸಲು ನಾನು ಬಯಸುತ್ತಿಲ್ಲ,ಆದರೆ ನಮ್ಮ ಸಂಸ್ಕೃತಿಯಂತೆ ನಾವು ಋಷಿಮುನಿಗಳ ಮಕ್ಕಳಾಗಿದ್ದೇವೆ” ಎಂದು ಅವರು ಘೋಷಿಸಿದರು.

ಮಾನವ ಹಕ್ಕು ಪಾಶ್ಚಾತ್ಯ ದೇಶಗಳ ಪರಿಕಲ್ಪನೆಯಾಗಿದೆ ಎಂದು ವಾದಿಸಿದ ಸಂದರ್ಭದಲ್ಲಿ ಸಿಂಗ್ ಈ ಹೇಳಿಕೆಯನ್ನು ನೀಡಿದರು. ಈ ವಿಷಯಕ್ಕೆ ಭಾರತೀಯ ಸಂಸ್ಕೃತಿಯು ಮಹತ್ವವನ್ನು ನೀಡಿರಲಿಲ್ಲ ಮತ್ತು ಸಂವಿಧಾನವನ್ನು ರಚಿಸಿದವರು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸಂವಿಧಾನದಿಂದ ಸ್ಪೂರ್ತಿ ಪಡೆದಿದ್ದರು ಎಂದೂ ಅವರು ಪ್ರತಿಪಾದಿಸಿದರು.

ಸಿಂಗ್ ಅವರು ಯಾವುದೇ ಸಾಕ್ಷ್ಯಾಧಾರದ ಬೆಂಬಲವಿಲ್ಲದೆ ಡಾರ್ವಿನ್‌ನನ್ನು ಪ್ರಶ್ನಿಸಿದ್ದು ಇದು ಮೊದಲ ಬಾರಿಯೇನಲ್ಲ. 2018ರಲ್ಲಿ ಸಹಾಯಕ ಮಾನವ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭ ಶಾಲಾಕಾಲೇಜುಗಳ ಪಠ್ಯಕ್ರಮಗಳಲ್ಲಿ ವಿಕಾಸವಾದವನ್ನು ಬದಲಿಸಬೇಕೆಂಬ ಪ್ರಸ್ತಾಪವನ್ನು ಅವರು ಮುಂದಿರಿಸಿದ್ದರು.

 ಆದರೆ ಈ ಬಾರಿ ಸದನದಲ್ಲಿ ಅವರ ಪ್ರತಿಪಾದನೆಗೆ ಡಿಎಂಕೆ ಸಂಸದೆ ಕನಿಮೋಳಿ ಅವರು ಸವಾಲನ್ನೊಡ್ಡಿದ್ದರು. “ದುರದೃಷ್ಟವಶಾತ್ ನನ್ನ ಪೂರ್ವಜರು ಋಷಿಮುನಿಗಳಾಗಿರಲಿಲ್ಲ. ವಿಜ್ಞಾನವು ಹೇಳುವಂತೆ ನನ್ನ ಪೂರ್ವಜರು ಮಾನವ ಜಾತಿಗೆ ಸೇರಿದ್ದರು ಮತ್ತು ನನ್ನ ಹೆತ್ತವರು ಶೂದ್ರರಾಗಿದ್ದರು. ಅವರು ಯಾವುದೇ ದೇವರಿಂದಲೂ ಹುಟ್ಟಿರಲಿಲ್ಲ ಅಥವಾ ಯಾವುದೇ ದೇವರ ಭಾಗವೂ ಆಗಿರಲಿಲ್ಲ. ಅವರು ಅದರಿಂದ ಹೊರಗೆ ಜನಿಸಿದ್ದರು ಮತ್ತು ನಾನು ಹಾಗೂ ನನ್ನ ರಾಜ್ಯದ ಹಲವರು ಸಾಮಾಜಿಕ ನ್ಯಾಯ ಆಂದೋಲನ ಮತ್ತು ಮಾನವ ಹಕ್ಕುಗಳಿಗಾಗಿ ನಮ್ಮ ಹೋರಾಟದಿಂದಾಗಿ ಇಲ್ಲಿದ್ದೇವೆ ಮತ್ತು ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ ’’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News