ಆನೆ ದಂತ ಮಾರಾಟ: ನಿವೃತ್ತ ಜೂನಿಯರ್ ಇಂಜಿನಿಯರ್ ಸೇರಿ ನಾಲ್ವರ ಬಂಧನ

Update: 2019-07-20 16:10 GMT

ಬೆಂಗಳೂರು, ಜು.20: ಆನೆದಂತ ತಂದು ಮಾರಾಟ ಮಾಡುತ್ತಿದ್ದ ಆರೋಪದಡಿ ನಿವೃತ್ತ ಜೂನಿಯರ್ ಇಂಜಿನಿಯರ್ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಇಲ್ಲಿನ ಜಾಲಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಸೇಲಂನ ವಿದ್ಯುತ್ ಇಲಾಖೆಯ ನಿವೃತ್ತ ಜೂನಿಯರ್ ಇಂಜಿನಿಯರ್ ಮಾದೇಶ್ವರನ್(59), ಕೊಯಮತ್ತೂರಿನ ಮೇಟು ಪಾಳ್ಯಂನ ಉನ್ನಿಕೃಷ್ಣನ್ (35), ಅನಗಪುತ್ತೂರಿನ ವಿಜಯಶೀಲನ್ (38) ಹಾಗೂ ಪೆರಂದೂರಿನ ವಿಜಯ್ (37) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಜಾಲಹಳ್ಳಿಯ ಕಾಳಿಂಗ ವೃತ್ತದ ಬಳಿ ಬಂಧಿತ ಉನ್ನಿಕೃಷ್ಣನ್ ಹಾಗೂ ವಿಜಯಶೀಲನ್ ಗೋಣಿ ಚೀಲದೊಳಗೆ ಆನೆದಂತಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಾರಾಟ ಕೃತ್ಯದಲ್ಲಿ ಇನ್ನೂ ಕೆಲವರಿದ್ದು, ಅವರ ಬಂಧನಕ್ಕೂ ಶೋಧ ನಡೆಸಲಾಗಿದ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮಾದೇಶ್ವರನ್, ನಿವೃತ್ತರಾಗಿ 7 ತಿಂಗಳು ಕಳೆದಿದ್ದು, ಹಮಾಲಿ ಕೆಲಸ ಮಾಡುತ್ತಿದ್ದ ವಿಜಯ್ ಜೊತೆ ಸೇರಿ ಆನೆದಂತಗಳನ್ನು ತಂದು ತಮ್ಮದೇ ರಾಜ್ಯದ ಗಾರೆ ಕೆಲಸ ಮಾಡುತ್ತಿದ್ದ ಉನ್ನಿಕೃಷ್ಣನ್ ಹಾಗೂ ವಿಜಯಶೀಲನ್‌ಗೆ ನೀಡಿರುವುದು ಗೊತ್ತಾಗಿದೆ.

ಆರೋಪಿಗಳಿಂದ 8 ಆನೆದಂತಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತರು ಎಲ್ಲಿಂದ ಆನೆದಂತಗಳನ್ನು ತಂದಿದ್ದರು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News