ಡಿಸಿಎಂ ಹುದ್ದೆ ಕೊಟ್ಟರೂ ನನಗೆ ಬೇಡ: ರಾಮಲಿಂಗಾರೆಡ್ಡಿ

Update: 2019-07-20 16:21 GMT

ಬೆಂಗಳೂರು, ಜು.20: ನನಗೆ ಉಪ ಮುಖ್ಯಮಂತ್ರಿ ಹುದ್ದೆ ಬೇಡ. ನಮ್ಮ ಪಕ್ಷ ಹಾಗೂ ಬಿಜೆಪಿಯಲ್ಲಿ ಅನೇಕ ಮಂದಿ ಉಪ ಮುಖ್ಯಮಂತ್ರಿಯಾಗಬೇಕೆಂದು ಕೊಂಡಿದ್ದಾರೆ. ಆದರೆ, ನನಗೆ ಯಾವುದೇ ಸ್ಥಾನಮಾನಗಳ ಆಸೆಯಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಶನಿವಾರ ಪದ್ಮನಾಭ ನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ರಾಮಲಿಂಗಾರೆಡ್ಡಿ ಮಾತನಾಡಿದರು.

ನಾನು ಆಗಾಗ ದೇವೇಗೌಡರನ್ನು ಭೇಟಿಯಾಗುತ್ತಿರುತ್ತೇನೆ. ಹಾಗೆಯೇ ಇವತ್ತು ಭೇಟಿಯಾಗಿದ್ದೇನೆ. ಇದೊಂದು ಸೌಜನ್ಯದ ಭೇಟಿ ಅಷ್ಟೇ. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ರಾಜ್ಯ ರಾಜಕೀಯದ ವಿದ್ಯಾಮಾನಗಳ ಬಗ್ಗೆಯೂ ಚರ್ಚೆಯಾಗಿಲ್ಲ ಎಂದು ಅವರು ಹೇಳಿದರು.

ದೇವೇಗೌಡರ ಜೊತೆ ನಡೆದ ಮಾತುಕತೆ ವೇಳೆ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆಯಾಗಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೊಲಿಕೆ ಬಗ್ಗೆಯಾಗಲಿ ಯಾವುದೇ ಚರ್ಚೆ ಆಗಿಲ್ಲ ಎಂದು ರಾಮಲಿಂಗಾರೆಡ್ಡಿ ಎಂದು ಅವರು ತಿಳಿಸಿದರು.

ಬೆಂಗಳೂರಿನ ಶಾಸಕರಾದ ನಾವು ಒಟ್ಟಾಗಿಯೇ ರಾಜೀನಾಮೆ ನೀಡಿದ್ದೇವೆ. ಈ ಸಂಬಂಧ ಎಸ್.ಟಿ.ಸೋಮಶೇಖರ್ ನೀಡಿರುವ ಹೇಳಿಕೆ ಸತ್ಯ. ಆದರೆ, ನಮ್ಮ ಪಕ್ಷದ ನಾಯಕರು ಹಾಗೂ ಜನರ ಒತ್ತಡಕ್ಕೆ ಮಣಿದು ನಾನು ರಾಜೀನಾಮೆ ವಾಪಸ್ ಪಡೆದಿದ್ದೇನೆ. ಕಳೆದ ರವಿವಾರ ನಾನು ಸೋಮಶೇಖರ್ ಜೊತೆ ಮಾತನಾಡಿದೆ. ಆದರೆ, ನಂತರ ಅವರು ನನ್ನ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಅವರು ಹೇಳಿದರು.

ವಸತಿ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಎಂಟಿಬಿ ನಾಗರಾಜ್ ಅವರನ್ನು ಭೇಟಿಯಾಗಿಲ್ಲ. ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಅವರನ್ನು ಮಾತ್ರ ಒಂದು ಬಾರಿ ಭೇಟಿಯಾಗಿದ್ದೆ ಅಷ್ಟೇ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News