ವಿಪ್ ಇಲ್ಲದೆ ಅನರ್ಹಗೊಳಿಸುವ ಕಾನೂನು ಜಾರಿಯಾಗಲಿ: ಬರಗೂರು ರಾಮಚಂದ್ರಪ್ಪ

Update: 2019-07-20 16:32 GMT

ಚಿತ್ರದುರ್ಗ, ಜು.20: ಒಂದು ರಾಜಕೀಯ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡಿ, ಚುನಾಯಿತರಾದ ಬಳಿಕ ಅವಧಿ ಪೂರ್ಣಗೊಳಿಸುವ ಮೊದಲೇ ಕ್ಷೇತ್ರದ ಜನರಿಗೆ ವಂಚಿಸಿ ರಾಜೀನಾಮೆ ನೀಡುವ ಪಕ್ಷಾಂತರಿಗಳನ್ನು ವಿಪ್ ಇಲ್ಲದೆ ಅನರ್ಹ ಮಾಡುವಂತೆ ಕಠಿಣ ಕಾನೂನುಗಳು ಜಾರಿಯಾಗಬೇಕು ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಶನಿವಾರ ನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಐದು ವರ್ಷಕ್ಕೊಂದು ಬಾರಿ ಚುನಾವಣೆಗಳು ನಡೆಯುತ್ತವೆ. ಅದರಲ್ಲಿ ಒಂದು ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿದ ಅಭ್ಯರ್ಥಿಯು ಕಡ್ಡಾಯವಾಗಿ ಐದು ವರ್ಷ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಆದರೆ, ಇಂದಿನ ಸ್ಥಿತಿ ಭಿನ್ನವಾಗಿದೆ. ಹೀಗಾಗಿ, ಪಕ್ಷಾಂತರಿಗಳನ್ನು ಶಿಕ್ಷಿಸಲು ವಿಪ್ ಜಾರಿಗೊಳಿಸದೆಯೂ ಅನರ್ಹ ಮಾಡುವಂತಹ ಕಠಿಣ ಕಾನೂನು ಜಾರಿಯಾಗಬೇಕು. ಇಲ್ಲದಿದ್ದರೆ ಸುಧಾರಣೆ ಸಾಧ್ಯವಿಲ್ಲ ಎಂದರು.

ವಿಧಾನಸಭೆಯಲ್ಲಿ 101, 105, 107 ಈ ರೀತಿ ಶಾಸಕರು ಸಂಖ್ಯೆ ಆಗುತ್ತಿದ್ದಾರೆಯೇ ಹೊರತು ವ್ಯಕ್ತಿಯಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇಂತಹ ದುಸ್ಥಿತಿಗೆ ತಲುಪಿದ್ದು, ಪಂಚೇಂದ್ರಿಯ ವಂಚಿತ ಪ್ರಜಾಪ್ರಭುತ್ವ ನಿರ್ಮಾಣವಾಗುತ್ತಿದೆ ಎಂದು ವಿಷಾದಿಸಿದರು.

ಕರ್ನಾಟಕದಲ್ಲಿನ ಇಂದಿನ ರಾಜಕೀಯ ಬಿಕ್ಕಟ್ಟು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ದೇಶದಲ್ಲಿ ತಾಂತ್ರಿಕ ಪ್ರಜಾಪ್ರಭುತ್ವವಿದ್ದು, ತಾತ್ವಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವ ಅನೇಕ ಸಂಗತಿಗಳನ್ನು ಕಾಣುತ್ತಿದ್ದೇವೆ. ರಾಜಕಾರಣಿಗಳಿಗೆ ಸೈದ್ಧಾಂತಿಕತೆ ಇಲ್ಲದಂತಾಗಿದೆ ಎಂದ ಅವರು, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾದರೆ ಸೈದ್ಧಾಂತಿಕ ರಾಜಕಾರಣ ಅಗತ್ಯವಿದೆ ಎಂದು ಹೇಳಿದರು.

ರಾಜಕಾರಣಿಗಳು ತಮ್ಮ ಸ್ವಾರ್ಥ ಅಧಿಕಾರಕ್ಕಾಗಿ ಸಾಧಕ ರಾಜಕಾರಣ ಮಾಡಿದರೆ ವಿನಾಶ ಕಟ್ಟಿಟ್ಟ ಬುತ್ತಿ. ಆದುದರಿಂದಾಗಿ ನೈಜ ಪ್ರಜಾಪ್ರಭುತ್ವ ಉಳಿವಿಗಾಗಿ, ಜನಪ್ರತಿನಿಧಿಗಳು ಸ್ವ ಹಿತಾಸಕ್ತಿಗಳನ್ನು ಬದಿಗಿಡಬೇಕು. ಇಲ್ಲದಿದ್ದರೆ ಒಂದೇ ಸಿದ್ಧಾಂತ ಪ್ರತಿಪಾದಿಸುವವರ ಅಧಿಕಾರ ಚಲಾವಣೆಗೆ ಬರುತ್ತದೆ ಎಂದು ನುಡಿದರು.

ವಿಧಾನಸಭೆಯನ್ನು ನೋಡಿ, ಮಧ್ಯಮ ವರ್ಗದವರಲ್ಲಿ ಸಿನಿಕತನ ಸೃಷ್ಟಿಯಾಗಿದೆ. ಶಾಸನ ಸಭೆಯಲ್ಲಿ ಮಾತನಾಡಲು ಅವಕಾಶ ನೀಡದ ರೀತಿಯಲ್ಲಿ ಕೆಲವರು ವರ್ತಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ನಾನೂ ಯಾವ ಪಕ್ಷದ ಪರವೂ ಅಲ್ಲ, ವಿರೋಧಿಯೂ ಅಲ್ಲ. ಪ್ರಜಾಪ್ರಭುತ್ವ, ಸಂವಿಧಾನದ ಆಶಯ ಉಳಿಯಬೇಕು ಎಂಬುದಷ್ಟೇ ಮುಖ್ಯ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಚುನಾವಣೆಗಳು ದೊಡ್ಡ ಮಾರುಕಟ್ಟೆಗಳಾಗಿ ಬದಲಾಗಿವೆ. ಚುನಾವಣೆಗಳಲ್ಲಿ ಗೆಲ್ಲಲು ದೇವರು, ಧರ್ಮವನ್ನೇ ಬಂಡವಾಳ ಮಾಡಿಕೊಳ್ಳಲಾಗಿದೆ. ಮನುಷ್ಯರನ್ನು ಮಾತ್ರವಲ್ಲದೆ, ದೇವರನ್ನೂ ಶೋಷಣೆ ಮಾಡಿರುವ ದೇಶ ನಮ್ಮದಾಗಿದೆ. ಇಂದು ಧರ್ಮ ಗುರುಗಳಾಗುವ ಬದಲಿಗೆ ಜಾತಿ ಗುರುಗಳಾಗುತ್ತಿದ್ದಾರೆ. ಮಾಧ್ಯಮಗಳಿಂದು ಚುನಾವಣೆಯನ್ನು ಯುದ್ಧವೆಂಬಂತೆ ಬಿಂಬಿಸಿ, ಪ್ರತಿಸ್ಪರ್ಧಿಯನ್ನು ಶತ್ರುಗಳಂತೆ ತೋರಿಸುತ್ತಿವೆ.

-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News