ತ್ರಿಪುರಾ ವಿವಿ ಕ್ಯಾಂಪಸ್‌ನಲ್ಲಿ ಎಬಿವಿಪಿ ಧ್ವಜಾರೋಹಣಗೈದ ಉಪ ಕುಲಪತಿ !

Update: 2019-07-20 16:35 GMT

ಹೊಸದಿಲ್ಲಿ, ಜು. 20: ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಲು ಎಬಿವಿಪಿ ತ್ರಿಪುರಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಧಾರುಕರ್ ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಎಬಿವಿಪಿಯ ಧ್ವಜ ಆರೋಹಣ ಮಾಡಿದ್ದು, ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

 ‘‘ನನಗೆ ಆಹ್ವಾನ ನೀಡಲಾಗಿತ್ತು. ಆದುದರಿಂದ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಎಬಿವಿಪಿ ದೇಶ ವಿರೋಧಿ ಅಥವಾ ಭಯೋತ್ಪಾದಕ ಸಂಘಟನೆ ಅಲ್ಲ. ಅದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ. ಜನಸಂಘ ಅಸ್ತಿತ್ವಕ್ಕೆ ಬರುವ ಮುನ್ನವೇ ಆ ಸಂಘಟನೆ ಇತ್ತು. ಅದು ಯಾವುದೇ ಪಕ್ಷಕ್ಕೆ ಸೇರಿದ ಸಂಘಟನೆ ಅಲ್ಲ’’ ಎಂದು ಧಾರುಕರ್ ಸಮರ್ಥಿಸಿಕೊಂಡಿದ್ದಾರೆ.

ಕೆಲವು ವರ್ಷಗಳಿಂದ ತಾನು ದೇಶದ ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಇರಿಸಿಕೊಂಡಿದ್ದೇನೆ. ಕ್ಯಾಂಪಸ್‌ನಲ್ಲಿ ಎಬಿವಿಪಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ.

ಎಸ್‌ಎಫ್‌ಐಯಂತಹ ಇತರ ವಿದ್ಯಾರ್ಥಿ ಸಂಘಟನೆಗಳ ಧ್ವಜ ಆರೋಹಣ ಮಾಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧಾರುಕರ್, ತಾನು ಚೀನಾ, ರಶ್ಯ ವಿಷಯಗಳ ತಜ್ಞ. ಕಾರ್ಲ್‌ಮಾರ್ಕ್ಸ್ ಹಾಗೂ ಮಾವೋತ್ಸೆ ತುಂಗಾ ಅವರ ಚಿಂತನೆಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ತಾನು ಮುಕ್ತ ಮನಸ್ಸಿನವನಾಗಿದ್ದು, ಎಲ್ಲ ವಿದ್ಯಾರ್ಥಿ ಸಂಘಟನೆಗಳನ್ನು ಕೂಡ ಬೆಂಬಲಿಸುತ್ತೇನೆ ಎಂದಿದ್ದಾರೆ.

ಧಾರುಕರ್ ಅವರನ್ನು 2018 ಜುಲೈಯಲ್ಲಿ ತ್ರಿಪುರಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪ ಕುಲಪತಿಯನ್ನಾಗಿ ನೇಮಕ ಮಾಡಲಾಗಿತ್ತು. ಅದಕ್ಕಿಂತ ಮೊದಲು ಅವರು ಮರಾಠಾವಾಡ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News