ಸೋಮವಾರದವರೆಗೂ ರೆಸಾರ್ಟ್‌ನಲ್ಲಿಯೇ ವಾಸ್ತವ್ಯ: ರಿಲ್ಯಾಕ್ಸ್ ಮೂಡ್‌ನಲ್ಲಿ ಜೆಡಿಎಸ್ ಶಾಸಕರು

Update: 2019-07-20 16:40 GMT

ಬೆಂಗಳೂರು, ಜು.20: ರಾಜ್ಯದಲ್ಲಾದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಳಿಕ ದೇವನಹಳ್ಳಿಯ ಬಳಿಯಿರುವ ಖಾಸಗಿ ರೆಸಾರ್ಟ್‌ಗೆ ತೆರಳಿದ್ದ ಜೆಡಿಎಸ್ ಪಕ್ಷದ ಶಾಸಕರು ರಿಲ್ಯಾಕ್ಸ್ ಮೂಡ್‌ನಲ್ಲಿದ್ದು, ಸೋಮವಾರವರೆಗೂ ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಕಳೆದ ಹದಿನೈದು ದಿನಗಳಿಂದ ರಾಜಕೀಯ ಜಂಜಾಟದಲ್ಲಿ ಮುಳುಗಿ ರೆಸಾರ್ಟ್‌ಗೆ ತೆರಳಿದ್ದ ಜೆಡಿಎಸ್ ಶಾಸಕರು ಒಂದೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಪ್ರಸ್ತುತ ಯಾವುದೇ ವಿಷಯಗಳ ಬಗ್ಗೆ ಯೋಚಿಸದೇ ರಿಲ್ಯಾಕ್ಸ್‌ನಲ್ಲಿದ್ದಾರೆ. ಮತ್ತೊಂದು ಕಡೆ ಸರಕಾರ ಉಳಿಸಿಕೊಳ್ಳುವ ಸಲುವಾಗಿ ಮೈತ್ರಿ ಪಕ್ಷದ ನಾಯಕರು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ.

ಕಳೆದ ಎರಡು ದಿನಗಳಿಂದ ಸರಕಾರ ಉಳಿಸಿಕೊಳ್ಳಲು ವಿಶ್ವಾಸಮತಯಾಚನೆಯ ಕುರಿತು ಸದನದಲ್ಲಿ ಚರ್ಚೆ ನಡೆಸುತ್ತಿರುವ ಮೈತ್ರಿ ಸರಕಾರದ ಪರವಾಗಿ ಬಹುತೇಕ ಸಚಿವರು ಸೇರಿದಂತೆ ಶಾಸಕರು ತಮ್ಮ ಅಭಿಪ್ರಾಯವನ್ನು ಮಂಡನೆ ಮಾಡಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಹೋದ ಅವರು ರಾತ್ರಿ ಎಂಟು ಒಂಬತ್ತು ಗಂಟೆವರೆಗೂ ಸದನದಲ್ಲಿಯೇ ಕಳೆದಿದ್ದಾರೆ. ಶುಕ್ರವಾರ ರಾತ್ರಿ 7-30 ಕ್ಕೆ ಸದನ ಮುಕ್ತಾಯವಾದ ಕೂಡಲೇ ಶಾಲಾ ಮಕ್ಕಳನ್ನು ಕೂರಿಸಿದಂತೆ ಸಾಲಾಗಿ ಬಸ್ ಹತ್ತಿಸಿ ರೆಸಾರ್ಟ್ ಗೆ ತಂದು ಬಿಟ್ಟಿದ್ದಾರೆ.

ಶನಿವಾರ ಹಾಗೂ ರವಿವಾರ ಸದನ ಇರುವುದಿಲ್ಲವಾದ್ದರಿಂದ ಜೆಡಿಎಸ್‌ನ ಎಲ್ಲ ಶಾಸಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶನಿವಾರ ಬೆಳಗ್ಗೆ ಸಚಿವ ಬಂಡೆಪ್ಪ ಕಾಶೆಂಪೂರ್ ದೇವಸ್ಥಾನಕ್ಕೆ ಹೋಗಿ ಬಂದಿದ್ದು ಬಿಟ್ಟರೆ ಬೇರೆ ಯಾವ ಶಾಸಕರೂ ರೆಸಾರ್ಟ್‌ನಿಂದ ಹೊರ ಬಂದಿಲ್ಲ. ಎಲ್ಲರೂ ಒಟ್ಟಾಗಿ ಒಳಗಡೆಯೇ ವಿಶ್ರಾಂತಿ ಪಡೆಯುತ್ತಿದ್ದು, ಯಾರೂ ತಮ್ಮ ಮೊಬೈಲ್‌ಗಳನ್ನು ಬಳಸುತ್ತಿಲ್ಲ ಎನ್ನಲಾಗಿದೆ.

ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿರುವ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ಸೋಮವಾರ ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಆ ಬಳಿಕ ಸದನದಲ್ಲಾಗುವ ಬೆಳವಣಿಗೆಗಳ ಬಳಿಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News