ಹಫೀಝ್ ಬಂಧನ ತೋರಿಕೆಗಷ್ಟೆ, ಯಾವುದೇ ಪರಿಣಾಮವಿಲ್ಲ: ಅಮೆರಿಕ

Update: 2019-07-20 16:40 GMT

ವಾಶಿಂಗ್ಟನ್, ಜು. 20: 2001ರ ಸಂಸತ್ ಭವನದ ಮೇಲಿನ ದಾಳಿ ಮತ್ತು 2008ರ ಮುಂಬೈ ಭಯೋತ್ಪಾದಕ ದಾಳಿಗಳ ಸೂತ್ರಧಾರಿ ಹಫೀಝ್ ಸಯೀದ್‌ನ ಬಂಧನದ ಹಿಂದಿರುವ ಪಾಕಿಸ್ತಾನದ ಉದ್ದೇಶಗಳ ಬಗ್ಗೆ ಅಮೆರಿಕದ ಟ್ರಂಪ್ ಆಡಳಿತ ಶುಕ್ರವಾರ ಸಂಶಯ ವ್ಯಕ್ತಪಡಿಸಿದೆ. ಹಿಂದೆ ಕೂಡ ಅವನನ್ನು ಬಂಧಿಸಲಾಗಿತ್ತಾದರೂ, ಅದು ಅವನ ಚಟುವಟಿಕೆಗಳ ಮೇಲಾಗಲಿ, ಅವನ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬದ ಚಟುವಟಿಕೆಗಳ ಮೇಲಾಗಲಿ ಯಾವುದೇ ಪರಿಣಾಮವನ್ನು ಬೀರಿಲ್ಲ ಎಂದು ಅದು ಹೇಳಿದೆ.

‘‘ಹಿಂದೆ ಕೂಡ ಈ ರೀತಿ ಆಗಿರುವುದನ್ನು ನಾವು ನೋಡಿದ್ದೇವೆ. ನಾವು ಗಂಭೀರ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಎದುರು ನೋಡುತ್ತಿದ್ದೇವೆಯೇ ಹೊರತು, ತೋರಿಕೆಯ ಕ್ರಮಗಳನ್ನಲ್ಲ’’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳು ಹೇಳಿದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆಯಾಗಿರುವ ಹಫೀಝ್ ಸಯೀದ್‌ನನ್ನು ಪಾಕಿಸ್ತಾನವು ಬುಧವಾರ ಬಂಧಿಸಿದೆ. ಇದು 2001 ಡಿಸೆಂಬರ್ ಬಳಿಕ ಅವನನ್ನು ಪಾಕಿಸ್ತಾನ ಸರಕಾರ ಬಂಧಿಸುತ್ತಿರುವುದು 7ನೇ ಬಾರಿಯಾಗಿದೆ.

ಭಾರತೀಯ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ, 2001ರಲ್ಲಿ ಅವನನ್ನು ಮೊದಲ ಬಾರಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News