ಬಿಬಿಎಂಪಿ ಕೌನ್ಸಿಲ್ ಸಭೆ: ಲೋಕಾಯುಕ್ತ ವಿರುದ್ಧ ಕಾನೂನು ಸಮರಕ್ಕೆ ಬಿಬಿಎಂಪಿ ಸದಸ್ಯರ ಆಗ್ರಹ

Update: 2019-07-20 16:56 GMT

ಬೆಂಗಳೂರು, ಜು.20: ಲೋಕಾಯುಕ್ತದ ಮುಂದೆ ಬಿಬಿಎಂಪಿ ಸದಸ್ಯರು ಆಸ್ತಿ ವಿವರಗಳನ್ನು ಸಲ್ಲಿಸಬೇಕೆಂದು ಯಾವುದೇ ಕಾನೂನು ಇಲ್ಲ. ಈ ಸಂಬಂಧ ಪಾಲಿಕೆ ಆಯುಕ್ತರು ಹಿರಿಯ ವಕೀಲರನ್ನು ನೇಮಕ ಮಾಡಿ ಕಾನೂನು ಹೋರಾಟ ನಡೆಸುವಂತೆ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಪಡಿಸಿದ್ದಾರೆ.

ಶನಿವಾರ ನಗರದ ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಚುಕ್ಕೆ ಗುರುತಿನ ಪ್ರಶ್ನೆಗಳ ಚರ್ಚೆಯಲ್ಲಿ ಮಾತನಾಡಿದ ಅವರು, ಕೆಎಂಸಿ ಕಾಯ್ದೆ ಅನ್ವಯ ಪಾಲಿಕೆಯ 198 ಸದಸ್ಯರು ಮೇಯರ್ ಅವರಿಗೆ ಮಾತ್ರವೇ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.

ಹೈಕೋರ್ಟ್‌ನಲ್ಲಿ ಈ ಸಂಬಂಧ ಚರ್ಚೆಗಳು ನಡೆದಾಗ ಬಿಬಿಎಂಪಿ ಸದಸ್ಯರು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವಂತಿಲ್ಲ ಎಂದು ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಅಲ್ಲದೆ ಲೋಕಾಯುಕ್ತದ ಮುಂದೆ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವ ಬಗ್ಗೆ ಕಾನೂನಿನಲ್ಲಿ ಯಾವುದೇ ಅಂಶಗಳು ಇಲ್ಲವೆಂದು ಹೇಳಿದೆ ಎಂದು ತಿಳಿಸಿದರು.

ಬಿಬಿಎಂಪಿ ಸದಸ್ಯರು ಮೇಯರ್ ಅವರ ಮುಂದೆ ಪ್ರತಿವರ್ಷ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕೆಂದು ಕೆಎಂಸಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಈ ಸಂಬಂಧ ಯಾವುದೇ ನಿಯಮಗಳು ಇಲ್ಲವಾದರಿಂದ ಅವರು ಲೋಕಾಯುಕ್ತಕ್ಕೆ ತಮ್ಮ ಆಸ್ತಿಗಳನ್ನು ಸಲ್ಲಿಸಬೇಕಿದೆ ಎಂದರು.

ರಾಜ್ಯ ಚುನಾವಣಾ ಆಯೋಗವು ಈ ಕುರಿತಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಬಿಬಿಎಂಪಿ ಸದಸ್ಯರು ಮೇಯರ್ ಅವರ ಮುಂದೆ ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಸಲ್ಲಿಸುವುದರ ಜೊತೆಗೆ ಈ ಎಲ್ಲ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಹಾಕುವ ಸಂಪ್ರದಾಯ ಕಳೆದ 3-4 ವರ್ಷಗಳಿಂದ ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿದರು.

ಲೋಕಾಯುಕ್ತ ಸಂಸ್ಥೆಗೆ ಪಾಲಿಕೆ ಸದಸ್ಯರೊಬ್ಬರು ಆಸ್ತಿ ವಿವರ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ಮೇಯರ್ ಮತ್ತು ನನ್ನನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈ ಸಂಬಂಧ ವಕಾಲತ್ತು ನಡೆಸಿ, ಸಮಯ ಪಡೆದಿದ್ದೇವೆ. ಅಲ್ಲದೆ ನಗರಾಭಿವೃದ್ಧಿ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಮತ್ತು ಪಾಲಿಕೆ ಆಯುಕ್ತರನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈಗಾಗಲೇ ಆಯುಕ್ತರು ಕಾನೂನು ಅಭಿಪ್ರಾಯ ಪಡೆದಿದ್ದಾರೆ. ಅವರು ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕೆಂದು ಪದ್ಮನಾಭರೆಡ್ಡಿ ಮನವಿ ಮಾಡಿದರು.

ಇನ್ನು, ಸಭೆ ಆರಂಭವಾಗುತ್ತಿದ್ದಂತೆ ಮುಖ್ಯ ಕಾರ್ಯದರ್ಶಿಯಾಗಿ ಭಡ್ತಿ ಪಡೆದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಎಲ್ಲ ಸದಸ್ಯರು ಅಭಿನಂದಿಸಿದರು. ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಪಾಲಿಕೆ ಆಯುಕ್ತರು ಕುಳಿತಿದ್ದ ಸ್ಥಳಕ್ಕೆ ತೆರಳಿ ಹೂಗುಚ್ಚಗಳನ್ನು ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.

ತಡವಾಗಿ ಆರಂಭವಾದ ಸಭೆ ತಡವಾಗಿ ಆರಂಭವಾದ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಕಲಾಪಕ್ಕೆ ಶನಿವಾರ 11ಗಂಟೆಗೆ ಪಾಲಿಕೆ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಆದರೆ ಸಭೆ ಸಮಾವೇಶಗೊಂಡಿದ್ದು 12.45ಕ್ಕೆ ಸುಮಾರು 1-45 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು.

ಪಾಲಿಕೆ ಸದಸ್ಯರು ಆಸ್ತಿ ವಿವರಗಳನ್ನು ನೀಡುವ ವಿಚಾರವಾಗಿ ಅನೇಕ ಗೊಂದಲಗಳಿವೆ. ಇದಕ್ಕೆಲ್ಲ ಸೂಕ್ತ ಪರಿಹಾರ ದೊರೆಯಬೇಕು. ಅಲ್ಲದೆ, ಕರ್ನಾಟಕ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಲೇಬೇಕು ಎಂದರೆ, ಮೇಯರ್ ಕಚೇರಿಗೆ ನೀಡುವುದನ್ನೇ ಲೋಕಾಯುಕ್ತಕ್ಕೆ ನೀಡುತ್ತೇವೆ.

-ವಾಜಿದ್, ಬಿಬಿಎಂಪಿ ಆಡಳಿತ ಪಕ್ಷದ ಮುಖಂಡ

ಪಾಲಿಕೆ ಸದಸ್ಯರು ಇರುವುದು ಸಮಾಜ ಸೇವೆ ಮಾಡುವುದಕ್ಕೆ ಹೊರತು ಕೋರ್ಟ್ ಅಲೆಯುವುದಕ್ಕೆ ಅಲ್ಲ. ಅಲ್ಲದೆ ಪಾಲಿಕೆ ಸದಸ್ಯರು ಆಸ್ತಿ ವಿವರ ನೀಡಿದ್ದೇವೆ. ಆಸ್ತಿ ವಿವರ ಸಲ್ಲಿಸುವುದು ಲೋಕಾಯುಕ್ತಕ್ಕೋ ಅಥವಾ ಮೇಯರ್‌ಗೋ ಎಂದು ನಮಗೆ ಗೊಂದಲ ಇದೆ.

-ಪದ್ಮನಾಭ ರೆಡ್ಡಿ, ಬಿಬಿಎಂಪಿ ಪ್ರತಿಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News