ಪಿಒಪಿ ಗಣೇಶ ಮೂರ್ತಿ ಪರಿಸರಕ್ಕೆ ಮಾರಕ: ಮೇಯರ್ ಗಂಗಾಂಬಿಕೆ

Update: 2019-07-20 17:01 GMT

ಬೆಂಗಳೂರು, ಜು.20: ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ) ಗಣೇಶ ಮೂರ್ತಿ ಬಳಸುವುದರಿಂದ ಪರಿಸರಕ್ಕೆ ಮಾರಕವೇ ಹೆಚ್ಚು. ಹೀಗಾಗಿ, ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸಿ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮನವಿ ಮಾಡಿದರು.

ಶನಿವಾರ ದಕ್ಷಿಣ ವಲಯದ ಎಲ್ಲ 44 ವಾರ್ಡ್‌ಗಳಲ್ಲಿ ಸರಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಪಿಒಪಿ ಗಣೇಶ ಬದಲು ಮಣ್ಣಿನ ಮೂರ್ತಿ ಬಳಸುವ ಕುರಿತು ಅರಿವು ಮೂಡಿಸಲು ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಣೇಶ ಚತುರ್ಥಿಯ ದಿನದಂದು ದೊಡ್ಡ ಪಿಒಪಿ ಗಣೇಶ ಮೂರ್ತಿಗಳನ್ನು ಕೂರಿಸುತ್ತಾರೆ. ನಂತರ ಅದನ್ನು ಕೆರೆಗಳಲ್ಲಿ ವಿಸರ್ಜನೆ ಮಾಡುತ್ತಾರೆ. ಇದರಿಂದ ನೀರು ಕಲುಷಿತವಾಗುತ್ತದೆ. ಮತ್ತೆ ಆ ನೀರನ್ನು ಬಳಸಿದರೆ ಹಲವು ರೋಗಗಳು ಹರಡುತ್ತವೆ. ಆದ್ದರಿಂದ ಪಿಒಪಿ ಗಣೇಶ ಮೂರ್ತಿಗಳ ಬದಲು ಮಣ್ಣಿನ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಿಸೋಣ ಎಂದು ಹೇಳಿದರು.

ನಗರದಲ್ಲಿ ಪ್ಲಾಸಿಕ್ ಬಳಕೆ ನಿಷೇಧ, ಕಸ ವಿಂಗಡಣೆ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು, ನೀರು ಮಿತಬಳಕೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಬಗ್ಗೆ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಾದರೆ ನಿಮ್ಮ(ಮಕ್ಕಳ) ಪಾತ್ರ ಪ್ರಮುಖವಾಗಿದೆ. ಆದ್ದರಿಂದ ನೀವೆಲ್ಲರೂ ನಾಗರಿಕರಲ್ಲಿ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ನಾವು ಯಾವುದೇ ವಿಷಯವನ್ನಾಗಲಿ ಮಕ್ಕಳ ಮೂಲಕ ಅರಿವು ಮೂಡಿಸಲು ಮುಂದಾದರೆ ಅದು ತ್ವರಿತವಾಗಿ ಅನುಷ್ಠಾನಗೊಳ್ಳಲಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ದರಿಂದ ನೀವು ನಿಮ್ಮ ಮನೆ ಹಾಗೂ ಅಕ್ಕ-ಪಕ್ಕದ ಮನೆಗಳಲ್ಲಿ ಅರಿವು ಮೂಡಿಸಲು ಮುಂದಾಗಬೇಕು. ಜೊತೆಗೆ ನಿಮ್ಮ ಮನೆಗಳಲ್ಲಿ ಅದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತಂದು ಇತರರಿಗೆ ಮಾದರಿಯಾಗಬೇಕು ಎಂದರು.

ನಿಷೇಧಿತ ಪ್ಲಾಸಿಕ್ ಉತ್ಪನ್ನಗಳ ಬಳಕೆಯನ್ನು ನಗರದಲ್ಲಿ ಸಂಪೂರ್ಣವಾಗಿ ನಿಷೇಧಿಸಲು ಈಗಾಗಲೇ ಬಿಬಿಎಂಪಿಯಿಂದ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತಿನಿತ್ಯವೂ ಪಾಲಿಕೆ ಆರೋಗ್ಯಾಧಿಕಾರಿಗಳು ಅನಿರೀಕ್ಷಿತವಾಗಿ ಸಗಟು ವ್ಯಾಪಾರ ಮಳಿಗೆ ಹಾಗೂ ಅಂಗಡಿಗಳಿಗೆ ದಿಢೀರ್ ಭೇಟಿ ಕೊಟ್ಟು ಪ್ಲಾಸ್ಟಿಕ್ ಜಪ್ತಿ ಮಾಡಿ ದಂಡ ವಿಧಿಸುತ್ತಿದ್ದಾರೆ. ಇದೇ ರೀತಿ ಪ್ಲಾಸಿಕ್ ಬಳಕೆ ಮಾಡಿದಲ್ಲಿ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಗರದಲ್ಲಿ ನೀರಿನ ಅಭಾವ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗಾಗಲೇ ನಗರದಲ್ಲಿ 1.30 ಕೋಟಿ ಜನಸಂಖ್ಯೆ ಇದ್ದು, ನಿತ್ಯ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ನಗರಕ್ಕೆ ಬರುತ್ತಾರೆ. ಆದ್ದರಿಂದ ಈಗಿನಿಂದಲೇ ನೀರನ್ನು ಮಿತವಾಗಿ ಬಳಸಲು ಮುಂದಾಗಬೇಕು. ಕಟ್ಟಡ ನಿರ್ಮಾಣದ ವೇಳೆ ಎಲ್ಲರೂ ಮಳೆ ನೀರು ಕೊಯ್ಲು ನಿರ್ಮಾಣ ಮಾಡಿ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಮೇಲಿನ ಎಲ್ಲ ಅಂಶಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು, ದಕ್ಷಿಣ ವಲಯದ 44 ವಾರ್ಡ್‌ಗಳಲ್ಲಿಯೂ ಜಾಥಾ ಕಾರ್ಯಕ್ರಮ ನಡೆಸಲಾಯಿತ್ತು.. ಇದೇ ರೀತಿ ಉಳಿದ ಏಳು ವಲಯಗಳಲ್ಲೂ ಜಾಥಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು. ಈ ವೇಳೆ ಪಾಲಿಕೆ ಸದಸ್ಯರುಗಳು, ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು, ಎಲ್ಲಾ ಶಾಲಾ ಮುಖ್ಯಸ್ಥರುಗಳು ಹಾಗೂ ಇತರೆ ಗಣ್ಯರುಗಳು ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಕೈಚೀಲ ಬಳಸಬೇಡಿ

ಜಯನಗರದ 4ನೇ ಬ್ಲಾಕ್‌ನಲ್ಲಿ ಜಾಥಾ ಕಾರ್ಯಕ್ರಮ ನಡೆಯುವ ವೇಳೆ ಬೀದಿಬದಿ ವ್ಯಾಪಾರಿಯೊಬ್ಬರು ಪ್ಲಾಸಿಕ್ ಕೈಚೀಲದಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದನ್ನು ಕಂಡ ಮೇಯರ್ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೀವು ಪ್ಲಾಸ್ಟಿಕ್ ಕೈಚೀಲದ ಬದಲು ಪೇಪರ್ ಅಥವಾ ಬಟ್ಟೆ ಬ್ಯಾಗನ್ನು ಬಳಸಿ. ಮತ್ತೆ ಏನಾದರು ಪ್ಲಾಸ್ಟಿಕ್ ಕೈಚೀಲ ಬಳಕೆ ಮಾಡುವುದು ಕಂಡುಬಂದಲ್ಲಿ ಅಂಗಡಿಯಲ್ಲಿರುವ ಸಾಮಗ್ರಿಗಳನ್ನು ಜಪ್ತಿ ಮಾಡಲಾಗುವುದು ಎಚ್ಚರಿಕೆ ನೀಡಿದರು.

ನಿತ್ಯ 5 ಸಾವಿರ ಟನ್ ಕಸ

ನಗರದಲ್ಲಿ ಪ್ರತಿನಿತ್ಯ 5 ಸಾವಿರ ಟನ್‌ಗಳಷ್ಟು ಕಸ ಉತ್ಪತ್ತಿಯಾಗುತ್ತಿದ್ದು, ನಾಗರಿಕರು ಕಸವನ್ನು ಸಮರ್ಪಕವಾಗಿ ವಿಂಗಡಿಸದೇ ಇರುವ ಪರಿಣಾಮ ಕೋರೆಗಳಲ್ಲಿ ಸುರಿಯಲಾಗುತ್ತಿದೆ. ಈ ಸಂಬಂಧ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಹೊಸ ಟೆಂಡರ್ ಕರೆಯಲಾಗಿದ್ದು, ಸೆಪ್ಟೆಂಬರ್ 1ರಿಂದ ಜಾರಿಗೊಳಿಸಲಾಗುತ್ತಿದೆ ಎಂದು ಮೇಯರ್ ತಿಳಿಸಿದರು.

ಸೆಪ್ಟೆಂಬರ್‌ನಿಂದ ಕಡ್ಡಾಯವಾಗಿ ಹಸಿ ಕಸ, ಒಣ ಕಸ, ಪ್ರಾಣಿ ತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಬೇರ್ಪಡಿಸಿ ಕೊಡಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ. ವಿಂಗಡಣೆ ಮಾಡಿದ ಹಸಿ ಕಸವನ್ನು ಪಾಲಿಕೆ ವ್ಯಾಪ್ತಿಯಲ್ಲಿರುವ ಸಂಸ್ಕರಣಾ ಘಟಕಗಳಲ್ಲಿ ಕೊಂಡೊಯ್ದು ಗೊಬ್ಬರ ತಯಾರಿಸಿ ರೈತರಿಗೆ ವಿತರಿಸಲಾಗುವುದು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News