ಬಹುಮತ ಇದ್ದರೆ ಸಾಬೀತುಪಡಿಸಲಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ: ಯಡಿಯೂರಪ್ಪ

Update: 2019-07-20 17:17 GMT

ಬೆಂಗಳೂರು, ಜು.20: ವಿಶ್ವಾಸಮತ ಯಾಚನೆ ಮಾಡಲು ಅವಕಾಶ ನೀಡದೆ ಮೈತ್ರಿ ಸರಕಾರದ ಶಾಸಕರು ಬೇಕಂತಲೇ ಸದನದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಶನಿವಾರ ಯಲಹಂಕ ಬಳಿ ರಮಡಾ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಮತ ಇಲ್ಲದಿರುವ ಮುಖ್ಯಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು. ಬಹುಮತ ಇದ್ದರೆ ಸಾಬೀತುಪಡಿಸಲಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದರು.

ರಾಜ್ಯಪಾಲರು ಎರಡು ಬಾರಿ ಸೂಚನೆ ಕೊಟ್ಟರೂ ಮುಖ್ಯಮಂತ್ರಿ ಸದನದಲ್ಲಿ ಬಹುಮತ ಸಾಬೀತುಪಡಿಸಿಲ್ಲ. ಈಗಾಗಲೇ ಅತೃಪ್ತ ಶಾಸಕರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸ್ಪಷ್ಟವಾದ ತೀರ್ಪು ನೀಡಿದೆ. ಆಡಳಿತ ಪಕ್ಷದವರು ಜಾರಿಗೊಳಿಸಿರುವ ವಿಪ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಇವರ ಪರವಾಗಿ ತೀರ್ಪು ಬರುವ ಭ್ರಮೆಯಲ್ಲಿದ್ದಾರೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.

ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್‌ರನ್ನು ಬಿಜೆಪಿಯವರು ಅಪಹರಣ ಮಾಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಸದನದಲ್ಲಿ ಆರೋಪಿಸಿದ್ದಾರೆ. ಶ್ರೀಮಂತ ಪಾಟೀಲ್ ಚಿಕಿತ್ಸೆಗಾಗಿ ಮುಂಬೈಯಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಸ್ಪೀಕರ್ ಒಂದು ತಂಡವನ್ನು ಕಳುಹಿಸಿದ್ದಾರೆ. ಅಲ್ಲದೇ, ಈ ಸಂಬಂಧ ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪೀಕರ್‌ಗೆ ವರದಿ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಆದರೂ, ಶ್ರೀಮಂತ ಪಾಟೀಲ್ ಆಸ್ಪತ್ರೆಯಲ್ಲಿರುವ ಫೋಟೋಗಳನ್ನು ಹಿಡಿದುಕೊಂಡು ಸದನದಲ್ಲಿ ಶಿವಕುಮಾರ್ ಗದ್ದಲವೆಬ್ಬಿಸಿದ್ದಾರೆ. ಈ ಕೂಡಲೇ ಅವರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು. ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ‘ತನಗೆ ಬಿಜೆಪಿ ಸೇರುವಂತೆ ಆಮಿಷವೊಡ್ಡಿ 5 ಕೋಟಿ ರೂ.ಗಳನ್ನು ಮನೆಯಲ್ಲಿಟ್ಟು ಹೋಗಲಾಗಿತ್ತು. ಆನಂತರ ನಾನು ಅದನ್ನು ವಾಪಸ್ ಕಳುಹಿಸಿಕೊಟ್ಟೆ’ ಎಂದು ಸದನದಲ್ಲಿ ಬಿಜೆಪಿ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಎರಡು ತಿಂಗಳು ಹಣವನ್ನು ಮನೆಯಲ್ಲಿಟ್ಟುಕೊಂಡಿದ್ದು ಅಪರಾಧ. ಈ ಸಂಬಂಧ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಆಗ್ರಹಿಸಿದರು.

ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಬಿಜೆಪಿಯವರಿಂದ 28 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಸದನದಲ್ಲಿ ಆರೋಪಿಸಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ಹೋಗದೆ, ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News