ಪಿಒಪಿ ಗಣೇಶ ಮೂರ್ತಿ ಕಂಡುಬಂದಲ್ಲಿ ಆರೋಗ್ಯಾಧಿಕಾರಿ ಮೇಲೆ ಕ್ರಮ: ಬಿಬಿಎಂಪಿ ಮೇಯರ್ ಸುತ್ತೋಲೆ

Update: 2019-07-20 17:20 GMT
ಮೇಯರ್ ಗಂಗಾಂಬಿಕೆ

ಬೆಂಗಳೂರು, ಜು.20: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ ಹಾಗೂ ನಿಷೇಧಿತ ಪ್ಲಾಸಿಕ್ ಉತ್ಪನ್ನ ಕಂಡುಬಂದಲ್ಲಿ ಸಂಬಂಧಪಟ್ಟ ಆರೋಗ್ಯಾಧಿಕರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಸುತ್ತೋಲೆ ಹೊರಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಹಾಗೂ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಕಂಡುಬಂದಲ್ಲಿ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿಸಲಾಗುವುದು. ಜೊತೆಗೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಲಾಗುವುದು ಎಂದು ಶನಿವಾರ ಸುತ್ತೋಲೆ ಹೊಡಿಸಿದ್ದಾರೆ.

ನಗರದಲ್ಲಿ ಪರಿಸರ ಸಂರಕ್ಷಣೆ ಮಾಡುವ ಹಿತದೃಷ್ಟಿಯಿಂದ ಗಣೇಶ ಚತುರ್ಥಿ ವೇಳೆ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ) ಗಣೇಶ ಮೂರ್ತಿಗಳ ಬದಲು ಮಣ್ಣಿನಲ್ಲಿ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಉಪಯೋಗಿಸುವಂತೆ ಈಗಾಗಲೇ ಸಾರ್ವಜನಿಕರಲ್ಲಿ ಕೋರಲಾಗಿದೆ. ಈ ಸಂಬಂಧ ನಗರದ ಬಹುತೇಕ ಕಡೆ ಪಿಒಪಿ ಗಣೇಶ ತಯಾರಿಸುವುದು ಕಡಿಮೆ ಆಗಿದೆ. ಆದರೆ ಪಾಲಿಕೆ ಹೊರ ಪ್ರದೇಶಗಳಿಂದ ಪಿಒಪಿ ಗಣೇಶ ಮೂರ್ತಿಗಳನ್ನು ನಗರಕ್ಕೆ ತಂದು ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ನಗರದಲ್ಲಿ ಪಿಒಪಿ ಗಣೇಶ ಮೂರ್ತಿ ಬಾರದಿರುವಂತೆ ಎಚ್ಚರವಹಿಸಲು ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ. ಜತೆಗೆ ಎಲ್ಲಾ ವಲಯಗಳ ಆರೋಗ್ಯಾಧಿಕಾರಿಗಳು ಕೂಡಾ ಈ ಬಗ್ಗೆ ಹೆಚ್ಚು ಗಮನ ಹರಿಸಿ, ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿ ನಗರಕ್ಕೆ ಬರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪಿಒಪಿ ಗಣೇಶ ಮೂರ್ತಿಗಳು ಕಂಡುಬಂದಲ್ಲಿ ಅವನ್ನು ಪಾಲಿಕೆ ವಶಕ್ಕೆ ಪಡೆದು ಬೇರೆ ರಾಜ್ಯಕ್ಕೆ ರವಾನಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಪಿಒಪಿ ಗಣೇಶ ಮಾರಾಟ ಮಾಡುತ್ತಿದ್ದ ವರ್ತಕರಿಗೆ ದಂಡ ವಿಧಿಸಿ ಕ್ರಿಮಿನಲ್ ಮಕೋದ್ದಮೆ ದಾಖಸಲು ಕ್ರಮ ಕೈಗೊಳ್ಳಬೇಕು.

ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡು ಪಾಲಿಕೆ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News