ರಾಜ್ಯಪಾಲರ ಕಚೇರಿ ದುರ್ಬಳಕೆ ಆರೋಪ: ಸಿಪಿಎಂ ಪ್ರತಿಭಟನೆ

Update: 2019-07-20 17:23 GMT

ಬೆಂಗಳೂರು, ಜು.20: ಬಿಜೆಪಿಯು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದ)ದ ಕಾರ್ಯಕರ್ತರಿಂದು ಪ್ರತಿಭಟನೆ ನಡೆಸಿದರು.

ನಗರದ ಹಡ್ಸನ್ ವೃತ್ತದಲ್ಲಿ ಪ್ರತಿಭಟನೆ ನೆಡಸಿದ ಸಿಪಿಎಂ ಪಕ್ಷದ ನೂರಾರು ಕಾರ್ಯಕರ್ತರು, ವಿಧಾನಸಭೆಯಲ್ಲಿ ಶಾಸಕರಿಗೆ ಇರುವ ಅಧಿಕಾರವನ್ನು ಕಸಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ರಾಜ್ಯಪಾಲರನ್ನು ಮಧ್ಯಪ್ರವೇಶಿಸುವಂತೆ ಮಾಡಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಒಂದು ಸರಕಾರವನ್ನು ಕೆಡವಲು ಮುಂದಾಗಿರುವ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್, ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸಿ, ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. ತೀವ್ರ ಅಧಿಕಾರ ದಾಹ ಹಾಗೂ ಪ್ರಜಾತಂತ್ರ ವಿರೋಧಿ ಪ್ರಯತ್ನದ ಭಾಗವಾಗಿ ಮತ್ತೊಮ್ಮೆ ಕೇಂದ್ರ ಸರಕಾರ ಅಧಿಕಾರ ಹಾಗೂ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿಗೆ ಬಹುಮತವಿಲ್ಲದಿದ್ದರೂ ಅದನ್ನು ಸಾಬೀತುಪಡಿಸಲು ಸಾಧ್ಯವಿಲ್ಲವೆಂದರೂ ಆಪರೇಷನ್ ಕಮಲದ ಮೂಲಕ ವಿಶ್ವಾಸ ಮತಗಳಿಸಲು ಮುಂದಾಗಿದ್ದರು. ಆಗಲೂ ಕೇಂದ್ರ ಸರಕಾರ ತನ್ನ ಅಧಿಕಾರವನ್ನು ಹಾಗೂ ರಾಜ್ಯದಲ್ಲಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ದೂರಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡುವುದಾಗಿ ಹೇಳಿದ್ದು, ಆ ವಿಷಯದ ಮೇಲೆ ಚರ್ಚೆ ನಡೆಯುತ್ತಿರಬೇಕಾದರೆ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಲು ಅವಕಾಶವಿಲ್ಲ. ಆದರೂ, ಸದನದಲ್ಲಿ ಇಷ್ಟು ಸಮಯದೊಳಗೆ ಮುಗಿಸಬೇಕು ಎಂದು ತಾಕೀತು ಮಾಡುವ ಮೂಲಕ ಸರಕಾರವನ್ನು ಕಿತ್ತೊಗೆಯಲು ಪ್ರಯತ್ನ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಅವರು ಹೇಳಿದರು.

ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ್ ಮಾತನಾಡಿ, ಸದನದಲ್ಲಿ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಇಷ್ಟು ಸಮಯದಲ್ಲಿಯೇ ಮುಗಿಸಬೇಕೆಂದು ಸೂಚನೆ ನೀಡುವುದು ಸರಿಯಲ್ಲ. ಇದು ಸದನದ ಚರ್ಚಿಸುವ ಸದಸ್ಯರ ಹಕ್ಕಿನ ದಮನವಾಗಿದೆ. ವಿಧಾನಸಭಾಧ್ಯಕ್ಷ ಕೈಗೊಳ್ಳಬೇಕಾದ ನಿಯಾಮಾವಳಿಗಳ ಉಲ್ಲಂಘನೆಗೆ ಅವಕಾಶ ನೀಡುತ್ತದೆ ಎಂದರು.

ಮುಖ್ಯಮಂತ್ರಿಯು ತಾನು ನೀಡಿದ ಆದೇಶವನ್ನು ಪಾಲಿಸಿಲ್ಲ ಎಂಬುದನ್ನು ನೆಪವಾಗಿಸಿಕೊಂಡು ತಕ್ಷಣವೇ ಕೇಂದ್ರ ಸರಕಾರಕ್ಕೆ ವರದಿ ಕಳಿಸಿರುವುದು ಸರಿಯಲ್ಲ. ಇದು ಬಿಜೆಪಿಯ ವಿರೋಧ ಪಕ್ಷ ಮುಕ್ತ ಭಾರತ ನಿರ್ಮಿಸುವುದರ ಭಾಗವಾಗಿದೆ. ಈ ಹಿಂದೆ ಬಹುಮತವಿಲ್ಲದಿದ್ದರೂ ಯಡಿಯೂರಪ್ಪಗೆ ಸಿಎಂ ಆಗಿ ಬಹುಮತ ಸಾಬೀತುಪಡಿಸಲು ಒಂದು ವಾರ ಅವಕಾಶ ಕೇಳಿದರೆ ರಾಜ್ಯಪಾಲರು 15 ದಿನಗಳು ಅವಕಾಶ ನೀಡಿದ್ದರು. ಒಟ್ಟಾರೆಯಾಗಿ ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಂಡು ಸರಕಾರ ಅಸ್ಥಿರಗೊಳಿಸಲು ಮುಂದಾಗಿರುವ ಕ್ರಮ ಟೀಕಾರ್ಹವಾದುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News