ಉತ್ತರ ಪ್ರದೇಶದ ಈ ವ್ಯಕ್ತಿಯ ವಿದ್ಯುತ್ ಬಿಲ್ 128 ಕೋಟಿ ರೂ.!

Update: 2019-07-21 04:09 GMT
ಫೋಟೊ ಕೃಪೆ: ANI

ಹೊಸದಿಲ್ಲಿ, ಜು.21: ಉತ್ತರ ಪ್ರದೇಶದ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸರಬರಾಜು ಸಂಸ್ಥೆ ಬರೋಬ್ಬರಿ 128 ಕೋಟಿ ರೂಪಾಯಿ ಬಿಲ್ ವಿಧಿಸಿ ಶಾಕ್ ನೀಡಿದೆ. ಈ ಅಸಹಜ ಬಿಲ್ ಸರಿಪಡಿಸುವಂತೆ ಮಾಡಿದ ಮನವಿಗೂ ವಿದ್ಯುತ್ ಇಲಾಖೆ ಸ್ಪಂದಿಸದೇ, ತನ್ನ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ಅವರು ದೂರಿದ್ದಾರೆ.

ಉತ್ತರ ಪ್ರದೇಶದ ಹಾಪುರ ಬಳಿಯ ಚರ್ಮಿ ಗ್ರಾಮದಲ್ಲಿ ಪತ್ನಿಯೊಂದಿಗೆ ವಾಸವಿರುವ ಶಮೀಮ್ ತಮಗೆ ಬಂದ ವಿದ್ಯುತ್ ಬಿಲ್‌ನಿಂದ ಆಘಾತಗೊಂಡು ಅದನ್ನು ಸರಿಪಡಿಸುವಂತೆ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಅಷ್ಟು ಮೊತ್ತದ ಬಿಲ್ ಪಾವತಿಸಲೇಬೇಕು ಎಂದು ಅಧಿಕಾರಿಗಳು ಪಟ್ಟು ಹಿಡಿದ್ದಾರೆ ಎಂದು ಅವರು ಹೇಳಿದ್ದಾರೆ.

2 ಕಿಲೋವ್ಯಾಟ್ ಸಾಮರ್ಥ್ಯದ ಗೃಹಬಳಕೆ ವಿದ್ಯುತ್ ಸಂಪರ್ಕಕ್ಕೆ 128,45,95,444 ರೂಪಾಯಿ ಬಿಲ್ ವಿಧಿಸಲಾಗಿದೆ. ನಮ್ಮ ಮನವಿಯನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಅಷ್ಟೊಂದು ದೊಡ್ಡ ಮೊತ್ತವನ್ನು ಹೇಗೆ ಪಾವತಿಸಲಿ? ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಬಾಕಿ ಪಾವತಿ ಮಾಡದೇ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಶಮೀಮ್ ವಿವರಿಸಿದ್ದಾರೆ.

ಇಡೀ ನಗರದ ವಿದ್ಯುತ್ ಬಿಲ್ ಅನ್ನು ನನ್ನ ತಲೆಗೆ ಹಾಕಿದೆ ಎಂದು ಅವರು ಹೇಳುತ್ತಾರೆ. ಮಾಸಿಕ ಸರಾಸರಿ 700 ರಿಂದ 800 ರೂಪಾಯಿ ವಿದ್ಯುತ್ ಬಿಲ್ ತಮಗೆ ಬರುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

"ನವು ಬಳಸುವುದು ಫ್ಯಾನ್ ಮತ್ತು ಬಲ್ಬ್ ಮಾತ್ರ. ಅಷ್ಟು ದೊಡ್ಡ ಮೊತ್ತದ ಬಿಲ್ ಹೇಗೆ ಸಾಧ್ಯ? ನಾವು ಬಡವರು. ಅಷ್ಟು ದೊಡ್ಡ ಮೊತ್ತವನ್ನು ನಾವು ಎಲ್ಲಿಂದ ಪಾವತಿಸಬೇಕು?" ಎಂದು ಶಮೀಮ್ ಹಾಗೂ ಪತ್ನಿ ಖೈರುನ್ನಿಸಾ ಪ್ರಶ್ನಿಸುತ್ತಾರೆ.

"ಇದು ತಾಂತ್ರಿಕ ತೊಂದರೆಯಿಂದ ಆಗಿರಬೇಕು. ಈ ಬಿಲ್ ನಮಗೆ ಮರಳಿಸಿದರೆ, ತಾಂತ್ರಿಕ ದೋಷ ಸರಿಪಡಿಸಿ ಹೊಸ ಬಿಲ್ ನೀಡುತ್ತೇವೆ" ಎಂದು ಎಂಜಿನಿಯರ್ ರಾಮ್ ಶರಣ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News