ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಜೆಡಿಎಸ್ ಒಪ್ಪಿದೆ: ಸಚಿವ ಡಿಕೆಶಿ

Update: 2019-07-21 13:56 GMT

ಬೆಂಗಳೂರು, ಜು. 21: ಮೈತ್ರಿ ಸರಕಾರ ಉಳಿಸುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಯಾರಾದರೂ ಸಿಎಂ ಆಗಬಹುದು ಎಂದು ಜೆಡಿಎಸ್ ಮುಖಂಡರು ನಮ್ಮ ಬಳಿ ಕೇಳಿಕೊಂಡಿರುವುದು ನಿಜ ಎಂದು ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷದವರೇ ಮುಖ್ಯಮಂತ್ರಿ ಆಗಲಿ ಎಂದು ಜೆಡಿಎಸ್ ನಾಯಕರು, ನಮ್ಮ ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ. ಇದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಅಥವಾ ನಾನಾಗಲಿ, ಯಾರಾದರೂ ಸರಿ. ಕಾಂಗ್ರೆಸ್ ಪಕ್ಷದವರೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿ ಎಂದು ತಿಳಿಸಿದ್ದಾರೆ ಎಂದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ವಿಶ್ವಾಸ ಮತ ಯಾಚನೆ ಮಾಡಲಿದ್ದು, ಬಹುಮತ ಪಡೆಯಲಿದ್ದಾರೆ ಎಂದರು.

ನನಗೆ ಸಂಪೂರ್ಣ ವಿಶ್ವಾಸವಿದೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೋಲಿಕೆ ಮಾಡುವ ಪ್ರಯತ್ನ ನಡೆಸಿದ್ದೇವೆ. ನಾನು ಕೇವಲ ತೋರಿಕೆಗಾಗಿ ಓಡಾಡುತ್ತಿದ್ದೇನೆ, ಕೆಲಸ ಮಾಡುತ್ತಿಲ್ಲವೆಂಬ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಬಿಎಸ್ಪಿ ಶಾಸಕ ಮಹೇಶ್ ನಾಳೆ ಸದನಕ್ಕೆ ಬರುವ ವಿಶ್ವಾಸವಿದೆ. ನಾಳೆ ಏನಾಗಲಿದೆ ಎಂದು ಭವಿಷ್ಯ ಹೇಳಲು ಸಾಧ್ಯವಿಲ್ಲ. ಮೈತ್ರಿ ಸರಕಾರ ಸುಭದ್ರವಾಗಿದೆ ಎಂದ ಅವರು, ನಾವು ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನದಲ್ಲಿದ್ದೇವೆ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News