ನಾಳೆ ಕುಮಾರಸ್ವಾಮಿ ಸರಕಾರದ ಕೊನೆಯ ದಿನ: ಬಿ.ಎಸ್.ಯಡಿಯೂರಪ್ಪ

Update: 2019-07-21 13:11 GMT

ಬೆಂಗಳೂರು, ಜು.21: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಮೇಲೆ ಅವರ ಪಕ್ಷದವರು ವಿಪ್ ಜಾರಿ ಮಾಡಿದರೂ ಯಾವುದೇ ಪರಿಣಾಮ ಆಗುವುದಿಲ್ಲ. ನಾಳೆ ಸಾಯಂಕಾಲದವರೆಗೆ ಎಲ್ಲ ಮುಗಿಯುವ ಭರವಸೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರವಿವಾರ ಬೆಳಗ್ಗೆ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಲಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಡಲಿ ಎಂದು ಆಗ್ರಹಿಸಿದರು.

ಎಲ್ಲರ ಗಮನ ನಾಳೆ ಸುಪ್ರೀಂಕೋರ್ಟ್ ಏನು ತೀರ್ಪು ಕೊಡಬಹುದು ಅನ್ನೋದರ ಮೇಲಿದೆ. ಈಗಾಗಲೇ ಸುಪ್ರೀಂಕೋರ್ಟ್ ಮುಂಬೈನಲ್ಲಿರುವ 15 ಶಾಸಕರಿಗೆ ಸದನಕ್ಕೆ ಬರಬೇಕು ಅಂತ ಬಲವಂತ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ, ಮೈತ್ರಿ ಸರಕಾರದ ನಾಯಕರು ಕಾಲಹರಣ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವುದರಲ್ಲಿ ಅನಗತ್ಯ ವಿಳಂಬ ಮಾಡಬಾರದು. ನಾಳೆ ವಿಶ್ವಾಸ ಮತ ಮಾಡುವ ಭರವಸೆಯನ್ನು ಸ್ಪೀಕರ್ ಹಾಗೂ ಮುಖ್ಯಮಂತ್ರಿ ಇಬ್ಬರೂ ಕೊಟ್ಟಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಅವರು ಒತ್ತಾಯಿಸಿದರು.

ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರದ ಕೊನೆಯ ದಿನ. ನಾಳೆ ಎಲ್ಲದಕ್ಕೂ ಉತ್ತರ ಸಿಗುವ ನಿರೀಕ್ಷೆಯಿದೆ. ಬಹುಮತ ಇಲ್ಲದಿದ್ದರೂ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News