ಐಎಂಎ ವಂಚನೆ ಪ್ರಕರಣ: ಗಣ್ಯರು, ಜನಪ್ರತಿನಿಧಿಗಳೂ ಪಾಲುದಾರರು ಎಂದ ಮನ್ಸೂರ್ ?

Update: 2019-07-21 15:06 GMT

ಬೆಂಗಳೂರು, ಜು.21: ಐಎಂಎ ವಂಚನೆ ಪ್ರಕರಣ ಸಂಬಂಧ ಈಡಿ(ಜಾರಿ ನಿರ್ದೇಶನಾಲಯ) ಕಸ್ಟಡಿಯಲ್ಲಿರುವ ಮನ್ಸೂರ್ ಖಾನ್, ಪ್ರಾಥಮಿಕ ತನಿಖೆ ವೇಳೆ ಪ್ರಭಾವಿ ವ್ಯಕ್ತಿಗಳು, ಗಣ್ಯರು, ಜನಪ್ರತಿನಿಧಿಗಳ ಜೊತೆ ನಂಟಿದ್ದು, ಅವರೂ ಸಹ ಹಣಕಾಸು ವ್ಯವಹಾರದ ಪಾಲುದಾರರು ಎಂದು ಬಾಯಿಬಿಟ್ಟಿರುವುದಾಗಿ ಹೇಳಲಾಗುತ್ತಿದೆ.

ಶಾಂತಿನಗರದ ಈಡಿ ಕಚೇರಿಯಲ್ಲಿ ಜಂಟಿ ನಿರ್ದೇಶಕ ರಮಣ್ ಗುಪ್ತ, ಎಸಿಪಿ ತ್ಯಾಗರಾಜನ್ ನೇತೃತ್ವದ ಅಧಿಕಾರಿಗಳ ತಂಡ ಮನ್ಸೂರ್ ಖಾನ್ ಅನ್ನು ವಿಚಾರಣೆ ನಡೆಸಿದ್ದು, ಒಂದು ಸಾವಿರಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಪಡೆದಿದ್ದಾರೆ ಎನ್ನಲಾಗಿದೆ. ಕೆಲ ಪ್ರಭಾವಿ ವ್ಯಕ್ತಿಗಳು ಸಹ, ಸಂಸ್ಥೆಯ ಪಾಲುದಾರರಾಗಿರುವುದಾಗಿ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕೆಲವು ಸರಕಾರಿ ಅಧಿಕಾರಿಗಳ ಹೆಸರು ಕೂಡ ಪ್ರಸ್ತಾಪ ಮಾಡಿದ್ದು, ಬ್ಯಾಂಕ್ ವ್ಯವಹಾರಗಳು ನಡೆದಿರುವ ಬಗ್ಗೆ ದಾಖಲೆಗಳನ್ನು ನೀಡಿದ್ದಾನೆಂದು ಹೇಳಲಾಗುತ್ತಿದೆ.

ವಿಡಿಯೊ ದಾಖಲೆ: ಶನಿವಾರ ರಾತ್ರಿ ಮತ್ತು ರವಿವಾರವೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ ಈಡಿ ಅಧಿಕಾರಿಗಳು, ಆತನ ಹೇಳಿಕೆಗಳನ್ನು ವಿಡಿಯೊ ಮೂಲಕ ದಾಖಲು ಮಾಡಿದರು. ಅಷ್ಟೇ ಅಲ್ಲದೆ, ಕೆಲವೊಂದು ದಾಖಲೆಗಳಿಗೂ ಸಹಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ರಾಜಕೀಯ ನಂಟು?: ಬಂಧಿತ ಆರೋಪಿ ಮನ್ಸೂರ್ ಖಾನ್‌ಗೆ ರಾಜಕಾರಣಿಗಳ ನಂಟು ಇದ್ದು, ಈ ಬಗ್ಗೆಯೂ ಪ್ರಶ್ನೆ ಮಾಡಿದರು. ಇನ್ನು, ಈಗಾಗಲೇ ಬಂಧನ ವಾಗಿರುವ ಆತನ ಪರಮಾಪ್ತ ಆಡಳಿತಾರೂಢ ಜೆಡಿಎಸ್‌ನ ನಾಮ ನಿರ್ದೇಶಿತ ಬಿಬಿಎಂಪಿ ಸದಸ್ಯ ಸೈಯದ್ ಮುಜಾಹಿದ್ ಬಗೆಗಿನ ಮಾಹಿತಿ ಸಂಗ್ರಹಿಸಿದರು.

ಮನ್ಸೂರ್ ಖಾನ್‌ಗೆ ಜೀವ ಬೆದರಿಕೆ ಹಿನ್ನೆಲೆ ಆತನಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸದ್ಯ ಶಾಂತಿನಗರದ ಈಡಿ ಕಚೇರಿಯಲ್ಲಿಯೇ ಮನ್ಸೂರ್ ಖಾನ್‌ನನ್ನು ಅಧಿಕಾರಿಗಳು ಇಟ್ಟಿದ್ದಾರೆ.

ಶನಿವಾರ ಬೆಂಗಳೂರಿನ ಶಾಂತಿ ನಗರದಲ್ಲಿರುವ ಈಡಿ ಕಚೇರಿಗೆ ಕರೆತಂದ ಬಳಿಕ ಸಿವಿಲ್ ಕೋರ್ಟ್‌ಗೆ ಈಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಹಲವು ವಿಷಯಗಳ ಕುರಿತು ವಿಚಾರಣೆ ನಡೆಸಬೇಕಿದೆ. ಆದ್ದರಿಂದ, 15 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಸಲ್ಲಿತ್ತು. ಆದರೆ, 3 ದಿನಗಳಿಗೆ ಮಾತ್ರ ನೀಡಿ ನ್ಯಾಯಾಲಯ ಆದೇಶಿಸಿತು.

ಐಎಂಎಗೆ ಸೇರಿದ ನೂರಾರು ಖಾತೆಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದ್ದು, ಈ ಖಾತೆಗಳಲ್ಲಿ ಠೇವಣಿ ಇರುವ ನಗದು ಸಂಬಂಧ ಈಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News