ಬಿಎಂಟಿಸಿಗೆ ಇನ್ನೂ ಬಾರದ ಸ್ಮಾರ್ಟ್‌ಕಾರ್ಡ್ ದೃಢೀಕರಣ ಯಂತ್ರ

Update: 2019-07-21 16:27 GMT

ಬೆಂಗಳೂರು, ಜು.21: ವಿದ್ಯಾರ್ಥಿಗಳಿಗೆ ನೀಡಿರುವ ರಿಯಾಯ್ತಿ ಪಾಸುಗಳನ್ನು ‘ಸ್ಮಾರ್ಟ್ ಕಾರ್ಡ್’ ಪರಿಚಯಿಸುವ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೈಟೆಕ್ ಮಾಡಿದ್ದು, ವರ್ಷ ಕಳೆದರೂ ಅವುಗಳನ್ನು ದೃಢೀಕರಿಸುವ ವ್ಯವಸ್ಥೆ ಮಾಡುವುದನ್ನು ಮರೆತಿದೆ. ಇದರಿಂದ ಕಾರ್ಡ್‌ಗಳ ದುರ್ಬಳಕೆ ಆಗುತ್ತಿರುವ ಗುಮಾನಿ ಮೂಡಿದೆ.

ಸ್ಮಾರ್ಟ್ ಕಾರ್ಡ್‌ಗಳಲ್ಲಿ ಚಿಪ್ ಅಳವಡಿಸಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳ ತರಗತಿ, ಪಾಸು ವಿತರಣೆಯಾದ ದಿನ ಮತ್ತು ಪೂರ್ಣಗೊಳ್ಳುವ ದಿನಾಂಕ, ಸಂಚರಿಸುವ ಮಾರ್ಗದ ವಿವರವೆಲ್ಲವೂ ಇರುತ್ತದೆ. ಆದರೆ, ಆ ಚಿಪ್ ಅನ್ನು ರೀಡ್ ಮಾಡುವ ಯಂತ್ರಗಳೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡಬಹುದು. ಅಷ್ಟೇ ಅಲ್ಲ, ನಕಲಿ ಕಾರ್ಡ್‌ಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸುತ್ತಿದೆ.

ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಕಾರ್ಡ್ ಇರುತ್ತದೆ. ಆದರೆ, ಅದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿಯುವ ಸೌಲಭ್ಯ ನಿರ್ವಾಹಕರ ಬಳಿ ಇಲ್ಲ. ಇದಲ್ಲದೆ, ಅದನ್ನು ಬಳಕೆ ಮಾಡುವ ವಿದ್ಯಾರ್ಥಿಗಳು ನಿಗದಿಪಡಿಸಿದ ಮಾರ್ಗದಲ್ಲೇ ಸಂಚರಿಸುತ್ತಿದ್ದಾರೆಯೋ ಅಥವಾ ನಿಯಮ ಉಲ್ಲಂಘಸಿ ಅನ್ಯಮಾರ್ಗಗಳಲ್ಲಿ ಓಡಾಡುತ್ತಿದ್ದಾರೆಯೋ ಎಂಬುದು ಕೂಡ ಗೊತ್ತಾಗುವುದಿಲ್ಲ. ಸ್ವತಃ ಟಿಕೆಟ್ ಚೆಕಿಂಗ್ ಇನ್‌ಸ್ಪೆಕ್ಟರ್‌ಗೂ ಇದು ಗೊತ್ತಾಗುವುದಿಲ್ಲ. ಹೆಚ್ಚು-ಕಡಿಮೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಇದು ಮುಂದುವರಿದಿದ್ದು, ನಿಗಮಕ್ಕೆ ಲಕ್ಷಾಂತರ ರೂ. ನಷ್ಟ ಆಗುತ್ತಿದೆ.

ವರ್ಷಕ್ಕೆ ಮೂರೂವರೆಯಿಂದ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಈ ಪೈಕಿ ಈಗಾಗಲೇ 2.32 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 1.25 ಲಕ್ಷ ವಿದ್ಯಾರ್ಥಿಗಳಿಗೆ ಕಾರ್ಡ್‌ಗಳ ವಿತರಣೆ ಆಗಿದೆ. ಒಂದು ವಿದ್ಯಾರ್ಥಿ ಪಾಸಿನಿಂದ ವಾರ್ಷಿಕ ಸರಾಸರಿ 10,833 ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ (ಹತ್ತು ತಿಂಗಳಿಗೆ). ಅಂದರೆ ದಿನಕ್ಕೆ ಒಬ್ಬ ವಿದ್ಯಾರ್ಥಿಗೆ 36.11 ರೂ. ಆಗುತ್ತದೆ. ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಈ ಮೊತ್ತ 1.44 ಕೋಟಿ ರೂ. ಆಗುತ್ತದೆ. ಇದರಲ್ಲಿ ಶೇ.25ರಷ್ಟು ದುರ್ಬಳಕೆಯಾದರೂ ಲಕ್ಷಾಂತರ ರೂ. ಆಗುತ್ತದೆ ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಬಿಎಂಟಿಸಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳ ಸಂಖ್ಯೆ ಸುಮಾರು ಆರು ಸಾವಿರ ಇದ್ದು, ಶೇ.30ರಷ್ಟು ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್ (ಇಟಿಎಂ)ಗಳಿಲ್ಲ. ಇದ್ದರೂ ಅವುಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ ಸ್ಮಾರ್ಟ್ ಕಾರ್ಡ್‌ನಲ್ಲಿಯ ಚಿಪ್‌ಗಳನ್ನು ಮೌಲ್ಯಮಾಪನ ಮಾಡಿ, ವಿಶ್ಲೇಷಿಸುವ ಸೌಲಭ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಚಿಪ್ ರೀಡ್ ಮಾಡುವಂತಹ ಅಪ್ಲಿಕೇಷನ್ ಅಭಿವೃದ್ಧಿಪಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಇದನ್ನು ಅಳವಡಿಸುವ ಕೆಲಸ ಬಾಕಿ ಇದೆ. ಅಂದರೆ, ಇನ್ನೂ ಎರಡು-ಮೂರು ತಿಂಗಳು ಈ ನಷ್ಟದ ಬಾಬ್ತು ತಪ್ಪಿದ್ದಲ್ಲ.

ನಕಲಿ ಹಾವಳಿ ಎಲ್ಲಿ?: ಹೊಸ ಸ್ಮಾರ್ಟ್ ಕಾರ್ಡ್‌ಗಳಿಗೆ 200 ರೂ. ಸೇವಾ ಶುಲ್ಕ ಪಡೆಯಲಾಗುತ್ತಿದೆ. ಇದರೊಂದಿಗೆ ಪಾಸಿನ ಶುಲ್ಕ ಕೂಡ ಆಯಾ ತರಗತಿಗೆ ತಕ್ಕಂತೆ ಇರುತ್ತದೆ. ಆದರೆ, ದಾಸರಹಳ್ಳಿ, ಯಶವಂತಪುರ, ಪೀಣ್ಯ ಮತ್ತಿತರ ಕಡೆಗಳಲ್ಲಿರುವ ಸೈಬರ್ ಸೆಂಟರ್‌ನಂತಹ ಮಳಿಗೆಗಳಲ್ಲಿ ಈ ನಕಲಿ ಕಾರ್ಡ್‌ಗಳ ಹಾವಳಿ ಕಂಡುಬರುತ್ತಿದೆ. ಕೇವಲ 80-100 ರೂ.ಗಳಿಗೆ ಲಭ್ಯವಾಗುತ್ತಿವೆ ಎಂಬ ದೂರುಗಳು ಬಿಎಂಟಿಸಿ ಘಟಕಗಳಿಗೆ ಬರುತ್ತಿವೆ.

ಸ್ಮಾರ್ಟ್ ಕಾರ್ಡ್‌ಗಳಲ್ಲಿರುವ ಚಿಪ್ ರೀಡ್ ಮಾಡುವ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದ್ದು, ಒಂದೆರಡು ತಿಂಗಳಲ್ಲಿ ಇಟಿಎಂಗಳು ಮತ್ತು ಅವುಗಳಲ್ಲಿ ಈ ನೂತನ ಅಪ್ಲಿಕೇಷನ್‌ಗಳ ವ್ಯವಸ್ಥೆ ಬರಲಿದೆ.

- ಎನ್.ವಿ.ಪ್ರಸಾದ್, ಬಿಎಂಟಿಸಿ ಎಂ.ಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News