ಕಟ್ಟಡ ಕಾಮಗಾರಿಗೆ ಬೋರ್‌ವೆಲ್ ಕೊರೆಯಲು ಅನುಮತಿ ಇಲ್ಲ: ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್

Update: 2019-07-22 15:52 GMT

ಬೆಂಗಳೂರು, ಜು.22: ಕಟ್ಟಡ ಕಾಮಗಾರಿಗಾಗಿ ಬೋರ್‌ವೆಲ್ ಕೊರೆಯಲು ಕೋರುವವರಿಗೆ ಅನುಮತಿ ನೀಡಬಾರದು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ಅಂತರ್ಜಲ ಮಟ್ಟ ಪಾತಾಳ ಮುಟ್ಟಿರುವ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿಗಳಿಗಾಗಿ ಬೋರ್‌ವೆಲ್ ಕೊರೆಯುವುದಕ್ಕೆ ಅವಕಾಶ ನೀಡದಿರಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದ್ದು, ಇದಕ್ಕೆ ಪರ್ಯಾಯವಾಗಿ ಎಸ್‌ಟಿಪಿ ನೀರನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕಟ್ಟಡ ಮಾಲಕರು ಕಾಮಗಾರಿ ಜಾಗದಲ್ಲಿ ತಾತ್ಕಾಲಿಕವಾಗಿ ಶೆಡ್ ಹಾಕಿಕೊಳ್ಳುವ ಕಾರ್ಮಿಕರಿಗೆ ಕುಡಿಯಲು ಹಾಗೂ ಇತರೆ ಬಳಕೆಗಾಗಿ ನೀರು ಬೇಕಿದೆ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಹಲವೆಡೆ ಬೋರ್‌ವೆಲ್ ನೀರನ್ನು ಕಾಮಗಾರಿಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಅಂತರ್ಜಲಮಟ್ಟ ಕೆಳಕ್ಕೆ ಇಳಿದು ಸಮಸ್ಯೆಯಾಗಿರುವ ಸಮಯದಲ್ಲಿ ನೀರಿನ ದುರ್ಬಳಕೆಯನ್ನು ತಡೆಯಬೇಕಿದೆ ಎಂಬ ಅಭಿಪ್ರಾಯ ಬಂದಿದೆ.

ಜಲಮಂಡಳಿಯ 8,550 ಬೋರ್‌ವೆಲ್‌ಗಳ ಪೈಕಿ 618ರಲ್ಲಿ ನೀರು ಬತ್ತಿದೆ. ನಗರದಲ್ಲಿ 2.99 ಲಕ್ಷ ಖಾಸಗಿ ಬೋರ್‌ವೆಲ್‌ಗಳಿದ್ದು, ಅವುಗಳಲ್ಲೂ ನೀರು ಕಡಿಮೆಯಾಗಿದೆ. ಇದರಿಂದಾಗಿಯೇ ಕಾವೇರಿ ಮೇಲಿನ ಅವಲಂಬನೆ ಹೆಚ್ಚಿದ್ದು, ಪಂಪ್‌ಗಳಿಗೆ ಪೂರ್ಣ ಸಾಮರ್ಥ್ಯದಲ್ಲಿ ನೀರು ಪೂರೈಸುವ (1,453 ದಶಲಕ್ಷ ಲೀಟರ್) ಹೊರೆ ಉಂಟಾಗಿದೆ.

ಬನ್ನೇರುಘಟ್ಟ, ಸರ್ಜಾಪುರ, ಅತ್ತಿಬೆಲೆ, ಜಿಗಣಿ, ಯಲಹಂಕ, ತಲಘಟ್ಟಪುರ ಮೊದಲಾದ ಕಡೆಗಳಲ್ಲಿ 800-1,000 ಸಾವಿರ ಅಡಿಗೆ ಅಂತರ್ಜಲ ಮಟ್ಟ ಕುಸಿದಿದೆ. ಇಂತಹ ಸ್ಥಿತಿಯಲ್ಲಿ ಅಂತರ್ಜಲದ ದುರ್ಬಳಕೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಲಮಂಡಳಿಯ ಕೊಳಚೆ ನೀರು ಸಂಸ್ಕರಣಾ ಘಟಕಗಳ ನೀರನ್ನು ಸದ್ಬಳಕೆ ಮಾಡುವುದು ಕೂಡ ಈ ತೀರ್ಮಾನದ ಉದ್ದೇಶವಾಗಿದೆ.

1,067 ದಶಲಕ್ಷ ಲೀಟರ್: ಜಲಮಂಡಳಿಯ 25 ಎಸ್‌ಟಿಪಿಗಳಲ್ಲಿ 1,067 ದಶಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣೆಯಾಗುತ್ತಿದೆ. 250 ದಶಲಕ್ಷ ಲೀಟರ್ ನೀರನ್ನು ಕೋಲಾರಕ್ಕೆ ಕಳುಹಿಸಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಮಾತ್ರ ಕಾರ್ಖಾನೆಗಳು ಎಸ್‌ಟಿಪಿ ನೀರು ಖರೀದಿಸುತ್ತಿವೆ. ಉಳಿದಂತೆ ಶೇ.85ರಷ್ಟು ಸಂಸ್ಕರಿತ ನೀರನ್ನು ಕೆರೆ, ರಾಜಕಾಲುವೆಗೆ ಹರಿಸಲಾಗುತ್ತಿದೆ. ಈ ನೀರನ್ನು ಬಳಸಿಕೊಳ್ಳಬೇಕೆಂದು ನಿರ್ಮಾಣಕಾರರಿಗೆ ಕೋರಲಾಗಿತ್ತು. ಈ ಕೋರಿಕೆಗೆ ಮನ್ನಣೆ ದೊರೆಯದಿರುವುದರಿಂದ ನಿಯಮ ರೂಪಿಸಿ ಸಂಸ್ಕರಿತ ನೀರು ಬಳಸಿಕೊಳ್ಳುವಂತೆ ಮಾಡಲಾಗುತ್ತಿದೆ.

6 ಸಾವಿರ ಲೀಟರ್‌ಗೆ 350 ರೂ.: ಕಾರ್ಖಾನೆ, ಕಟ್ಟಡ ನಿರ್ಮಾಣಕಾರರು ಸಂಸ್ಕರಿತ ನೀರು ಬಳಸಿಕೊಳ್ಳಲು ತಮ್ಮದೇ ಟ್ಯಾಂಕರ್ ತರಬೇಕಿತ್ತು. ಕಚೇರಿಗಳಿಗಾದರೆ ಕೊಳವೆ ಜಾಲ ಅಳವಡಿಸಿ ನೀರು ಪೂರೈಸಲಾಗುತ್ತಿತ್ತು. ಈಗ ನಿಯಮ ಬದಲಿಸಿ ಜಲಮಂಡಳಿಯಿಂದಲೇ 4 ಟ್ಯಾಂಕರ್‌ನಿಂದ ಸಂಸ್ಕರಿತ ನೀರು ನೀಡಲು ತೀರ್ಮಾನಿಸಲಾಗಿದೆ. ಕಾವೇರಿಯ 68 ಟ್ಯಾಂಕರ್‌ಗಳ ಪೈಕಿ ನಾಲ್ಕು ಟ್ಯಾಂಕರ್‌ಗಳನ್ನು ಆರಿಸಿ ಬಣ್ಣ ಹಾಗೂ ಹೆಸರು ಬದಲಿಸಲಾಗುತ್ತದೆ. ಅಗತ್ಯವಿದ್ದರೆ ಟ್ಯಾಂಕರ್ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತದೆ. 6 ಸಾವಿರ ಲೀಟರ್ ಕಾವೇರಿ ನೀರಿಗೆ 540 ರೂ. ದರವಿದೆ. ಇದೇ ಪ್ರಮಾಣದ ಸಂಸ್ಕರಿತ ನೀರಿಗೆ 350 ರೂ. ದರ ನಿಗದಿಪಡಿಸಲಾಗಿದೆ.

ಅಂತರ್ಜಲ ಸಂರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ. ಕಟ್ಟಡ ಕಾಮಗಾರಿಗೆ ಎಸ್‌ಟಿಪಿ ನೀರು ಬಳಸಲು ಯಾವುದೇ ಸಮಸ್ಯೆ ಇಲ್ಲ. ಅಪಾರ್ಟ್‌ಮೆಂಟ್ ನಿರ್ಮಿಸುವಾಗ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸಬೇಕಾಗುತ್ತದೆ.

-ಸುರೇಶ್ ಹರಿ, ಕ್ರೆಡಾಯ್ ಬೆಂಗಳೂರು ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News