ಕಾರ್ಯದರ್ಶಿಗಳ ನಿರಂತರ ಬದಲಾವಣೆ: ಕುಂಟುತ್ತಾ ಸಾಗಿದೆ ಕನ್ನಡ& ಸಂಸ್ಕೃತಿ ಇಲಾಖೆಯ ಕಾರ್ಯ ಚಟುವಟಿಕೆ

Update: 2019-07-22 15:54 GMT

ಬೆಂಗಳೂರು, ಜು.22: ಒಂದು ವರ್ಷದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆರು ಕಾರ್ಯದರ್ಶಿಗಳು ಹಾಗೂ ಮೂವರು ನಿರ್ದೇಶಕರನ್ನು ಕಂಡಿದ್ದು, ಇದರಿಂದಾಗಿ ಇಲಾಖೆಯ ವಾರ್ಷಿಕ ಕಾರ್ಯಚಟುವಟಿಕೆ ಕುಂಟುತ್ತಾ ಸಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಇ- ಆಡಳಿತ ಜಾರಿಗೆ ತಂದ ಪ್ರಥಮ ಇಲಾಖೆ ಎಂಬ ಹಿರಿಮೆಗೆ ಭಾಜನವಾಗಿದ್ದ ಇಲಾಖೆ ಇದೀಗ ಜಯಂತಿಗಳಿಗೆ ಸೀಮಿತವಾಗುತ್ತಿದೆ ಎಂಬ ಆರೋಪ ಸಾಂಸ್ಕೃತಿಕ ವಲಯದಲ್ಲಿದೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗ ಚಕ್ರವರ್ತಿ ಮೋಹನ್ ಅವರು ಇಲಾಖೆಯ ಕಾರ್ಯದರ್ಶಿಯಾಗಿದ್ದರು. ನಂತರ ಬಸವರಾಜ್, ಡಾ.ಜೆ. ರವಿಶಂಕರ್, ಬಿ.ಎಚ್.ಅನಿಲ್ ಕುಮಾರ್, ಡಾ.ಜೆ.ರವಿಶಂಕರ್ ಅವರು ಹೆಚ್ಚುವರಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಆರ್.ಆರ್. ಜನ್ನು ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ಇಲಾಖೆಯ ಕಾರ್ಯದರ್ಶಿಯನ್ನು ಎರಡೆರಡು ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತಿದೆ. ಯಾವುದೇ ಒಂದು ಇಲಾಖೆ ಬಗ್ಗೆ ತಿಳಿದುಕೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಆದರೆ, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರ ಬದಲಾವಣೆಯಿಂದ ಕಳೆದ ವರ್ಷ ಇಲಾಖೆಯ ಕಾರ್ಯಚಟುವಟಿಕೆಯಲ್ಲಿ ಏರುಪೇರಾಯಿತು. ಪ್ರಸಕ್ತ ಸಾಲಿನಲ್ಲಿ ಈವರೆಗೂ ಕ್ರಿಯಾಯೋಜನೆ ರೂಪಿಸಿಲ್ಲ. ಇದರಿಂದ ಈ ವರ್ಷ ಕೂಡ ಧನಸಹಾಯ ಸೇರಿದಂತೆ ವಿವಿಧ ವಾರ್ಷಿಕ ಕಾರ್ಯ ಚಟುವಟಿಕೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೆಸರು ಹೇಳಲು ಇಚ್ಛಿಸದ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ ಇಲಾಖೆ ಮೂವರು ನಿರ್ದೇಶಕರನ್ನು ಕಂಡಿದೆ. ಎನ್.ಆರ್.ವಿಶುಕುಮಾರ್ ಅವರು ನಿವೃತ್ತಿಯಾದ ಬಳಿಕ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಬಳಿಕ ಕೆ.ಎಂ.ಜಾನಕಿ ಅವರನ್ನು ನಿರ್ದೇಶಕರನ್ನಾಗಿ ಮಾಡಲಾಯಿತು. ಈವರೆಗೂ ಕಳೆದ ಸಾಲಿನ ಧನಸಹಾಯ ಯೋಜನೆಯಡಿ ಅನುದಾನ ಹಂಚಿಕೆಯಾಗಿಲ್ಲ.

ಪ್ರಸಕ್ತ ಸಾಲಿನಲ್ಲಿ ಇಲಾಖೆ ಈವರೆಗೂ ಕ್ರಿಯಾ ಯೋಜನೆ ಸಿದ್ಧಗೊಳ್ಳದಿರುವುದು ವಿವಿಧ ಯೋಜನೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇಲಾಖೆಯು ಅಕಾಡೆಮಿಗಳಿಗೆ ಅನುದಾನವನ್ನೂ ಹಂಚಿಕೆ ಮಾಡಿಲ್ಲ. ಇದರಿಂದ ಅಕಾಡೆಮಿಗಳು ಸ್ತಬ್ಧವಾಗಿದ್ದು, ಯಾವುದೇ ಯೋಜನೆಯನ್ನು ಹೊಸದಾಗಿ ರೂಪಿಸುವ ಗೋಜಿಗೆ ಹೋಗಿಲ್ಲ.

ಅಧಿಕಾರಿಗಳ ವರ್ಗಾವಣೆಯಿಂದ ಸಾಂಸ್ಕೃತಿಕ ಕಾರ್ಯಚಟುವಟಿಕೆ ಕುಂಟುತ್ತಾ ಸಾಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಕಲೆ ಹಾಗೂ ಕಲಾವಿದರಿಗೆ ಪೂರಕ ಯೋಜನೆಯನ್ನು ರೂಪಿಸಿ, ಅನುಷ್ಠಾನ ಮಾಡಬೇಕು. ಈ ವಿಚಾರವಾಗಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿರುವೆ.

-ಜೆ.ಲೋಕೇಶ್, ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News