ಕಾಶ್ಮೀರ ವಿವಾದ: ಟ್ರಂಪ್ ಮಧ್ಯಸ್ಥಿಕೆಗೆ ಪ್ರಧಾನಿ ಮೋದಿ ಕೋರಿದ್ದರೇ ?

Update: 2019-07-23 04:01 GMT

ವಾಷಿಂಗ್ಟನ್: ನನೆಗುದಿಗೆ ಬಿದ್ದಿರುವ ಜಮ್ಮು ಕಾಶ್ಮೀರ ವಿವಾದದ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನದ ಜತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರದಲ್ಲಿ ನೆರವಾಗುವಂತೆ ತಮ್ಮನ್ನು ಕೋರಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಭಾರತ ಈ ಪ್ರತಿಪಾದನೆಯನ್ನು ಅಲ್ಲಗಳೆದಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜತೆಗಿನ ಮಾತುಕತೆಗೆ ಮುನ್ನ ಶ್ವೇತಭವನದ ಓವಲ್ ಆಫೀಸ್‌ನಲ್ಲಿ ಸೇರಿದ್ದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಮಧ್ಯಸ್ಥಿಕೆದಾರನಾಗಲು ನಾನು ಇಷ್ಟಪಡುತ್ತೇನೆ" ಎಂದು ಸ್ಪಷ್ಟಪಡಿಸಿದರು. ಪಾಕಿಸ್ತಾನ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೋರಿದೆ ಎಂದು ಹೇಳಿದರು.

ಕಾಶ್ಮೀರ ಸಮಸ್ಯೆ ದ್ವಿಪಕ್ಷೀಯ ವಿಚಾರ; ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂದು ಭಾರತ ಇದುವರೆಗೆ ಹೇಳುತ್ತಾ ಬಂದಿದ್ದು, ಟ್ರಂಪ್ ಹೇಳಿಕೆ ಭಾರತದ ಪಾಲಿಗೆ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಎರಡೂ ರಾಷ್ಟ್ರಗಳು ಕೋರಿದಲ್ಲಿ ಮಾತ್ರ ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕ ಈ ಹಿಂದೆ ತನ್ನ ನಿಲುವು ಸ್ಪಷ್ಟಪಡಿಸಿತ್ತು.

ಕಾಶ್ಮೀರ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಯಾವಾಗ ಕೋರಿದ್ದಾರೆ ಎನ್ನುವುದು ಅಧಿಕೃತವಾಗಿಲ್ಲ. ಪಾಕಿಸ್ತಾನ ಭಯೋತ್ಪಾದಕರಿಗೆ ನೀಡುತ್ತಿರುವ ನೆರವನ್ನು ನಿಲ್ಲಿಸಲು ಆ ದೇಶದ ಮೇಲೆ ಒತ್ತಡ ತರುವಂತೆ ಭಾರತ, ಅಮೆರಿಕವನ್ನು ಆಗ್ರಹಿಸುತ್ತಾ ಬಂದಿತ್ತು.

ಎರಡು ವಾರಗಳ ಹಿಂದೆ ಭಾರತದ ಪ್ರಧಾನಿ "ನೀವು ಮಧ್ಯಸ್ಥಿಕೆದಾರ ಅಥವಾ ವ್ಯಾಜ್ಯ ನಿರ್ಣಯಗಾರರಾಗಲು ಬಯಸಿದ್ದೀರಾ" ಎಂದು ಕೇಳಿದ್ದಾಗಿ ಟ್ರಂಪ್ ಹೇಳಿದ್ದಾರೆ. ಯಾವ ವಿಚಾರದಲ್ಲಿ ಎಂದು ತಾವು ಕೇಳಿದಾಗ ಕಾಶ್ಮೀರ ಎಂದು ಮೋದಿ ಉತ್ತರಿಸಿದ್ದಾಗಿ ಟ್ರಂಪ್ ವಿವರಿಸಿದ್ದಾರೆ.

"ಬಹುಶಃ ನಾನು ನೆರವಾದರೆ ಅದನ್ನು ಅವರು ಇಷ್ಟಪಡಬಹುದು ಎನ್ನುವುದು ನನ್ನ ಅನಿಸಿಕೆ" ಎಂದಿದ್ದಾರೆ. ಕಾಶ್ಮೀರ ಸುಂದರ ಸ್ಥಳ ಎಂದು ನಾನು ಕೇಳಿದ್ದೇನೆ. ಆದರೆ ಇಂದು ಅಲ್ಲಿ ಎಲ್ಲೆಡೆ ಬಾಂಬ್ ಹರಿದಾಡುತ್ತಿದೆ. ಸ್ಮಾರ್ಟ್ ಜನರನ್ನು ಹೊಂದಿದ ಈ ಎರಡು ನಂಬಲಸಾಧ್ಯ ದೇಶಗಳು ಸಮಸ್ಯೆ ಬಗೆಹರಿಸಿಕೊಂಡಿಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಹೇಳಿಕೆಯನ್ನು ಭಾರತ ಅಲ್ಲಗಳೆದಿದ್ದು, "ಮೋದಿಯವರು ಟ್ರಂಪ್‌ಗೆ ಇಂಥ ಯಾವ ಮನವಿಯನ್ನೂ ಮಾಡಿಲ್ಲ. ಪಾಕಿಸ್ತಾನದ ಜತೆ ನನೆಗುದಿಗೆ ಬಿದ್ದಿರುವ ವಿಚಾರವನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಬೇಕು ಎನ್ನುವುದು ಭಾರತದ ಸ್ಪಷ್ಟ ನಿಲುವು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News