ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಸಂಧಾನ ನಡೆಸಲು ಭಾರತ ಟ್ರಂಪ್ ರನ್ನು ಕೋರಿಲ್ಲ: ವಿದೇಶಾಂಗ ಸಚಿವರ ಸ್ಪಷ್ಟನೆ

Update: 2019-07-23 07:39 GMT

ಹೊಸದಿಲ್ಲಿ, ಜು.23: ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಜತೆ ಸಂಧಾನ ಮಾತುಕತೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ಮನವಿ ಮಾಡಿಲ್ಲ ಎಂದು ಮಂಗಳವಾರ ರಾಜ್ಯಸಭೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ.

“ಪ್ರಧಾನಿ ಮೋದಿ ಟ್ರಂಪ್ ಅವರಿಗೆ ಅಂತಹ ಯಾವುದೇ ಮನವಿ ಮಾಡಿಲ್ಲ ಎಂದು ನಾನು ನಿರ್ಣಾಯಕವಾಗಿ ಭರವಸೆ ನೀಡಲು ಬಯಸುತ್ತೇನೆ'' ಎಂದು ಜೈಶಂಕರ್ ಮೇಲ್ಮನೆಯಲ್ಲಿ ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಅದನ್ನು ಸ್ವಾಗತಿಸಿದರು.

“ಪಾಕಿಸ್ತಾನದ ಜತೆಗಿನ ಎಲ್ಲಾ ಪ್ರಮುಖ ವಿಚಾರಗಳನ್ನು ದ್ವಿಪಕ್ಷೀಯವಾಗಿ ಚರ್ಚಿಸಿ ಪರಿಹರಿಸಬೇಕೆಂದು ಭಾರತ ಯಾವತ್ತೂ ನಂಬಿದೆ. ಪಾಕಿಸ್ತಾನ ಜತೆಗೆ ಯಾವುದೇ ಮಾತುಕತೆ ನಡೆಯಬೇಕಾದರೆ ಮೊದಲು ಉಗ್ರವಾದಕ್ಕೆ ಅಂತ್ಯ ಹಾಡಬೇಕು'' ಎಂದು ಅವರು ಹೇಳಿದರು.

ಆದರೆ  ವಿಪಕ್ಷಗಳು ಈ ವಿಚಾರದಲ್ಲಿ ಗದ್ದಲ ಸೃಷ್ಟಿಸಿದಾಗ ಇಂತಹ ರಾಷ್ಟ್ರೀಯ ಮಹತ್ವದ ವಿಚಾರದಲ್ಲಿ ಸದನ ಒಂದು ದನಿಯಲ್ಲಿ ಮಾತನಾಡಬೇಕು ಎಂದು ಹೇಳಿ ಕಲಾಪವನ್ನು ಸಭಾಪತಿ ವೆಂಕಯ್ಯ ನಾಯ್ಡು ಮುಂದೂಡಿದರು.

ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಕಾಶ್ಮೀರ ವಿವಾದ ಪರಿಹರಿಸಲು ಸಂಧಾನ ನಡೆಸುವಂತೆ ಮೋದಿ ತಮಗೆ ಮನವಿ ಮಾಡಿದ್ದರೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜತೆಗಿನ ಭೇಟಿ ವೇಳೆ ಟ್ರಂಪ್ ಹೇಳಿದ್ದರು.

ಟ್ರಂಪ್ ಅವರ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಇಂತಹ ಯಾವುದೇ ಮನವಿ ಮಾಡಲಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News