ಮೋದಿ 2.0: ಮೊದಲ 50 ದಿನಗಳಲ್ಲಿ 12 ಲಕ್ಷ ಕೋ.ರೂ.ಕಳೆದುಕೊಂಡ ದಲಾಲ್ ಸ್ಟ್ರೀಟ್‌ ಹೂಡಿಕೆದಾರರು

Update: 2019-07-23 13:36 GMT

ಹೊಸದಿಲ್ಲಿ,ಜು.23: ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಭಾರೀ ಗೆಲುವು ಸಾಧಿಸಿದ ಮೋದಿ ಸರಕಾರವು ಎರಡನೇ ಬಾರಿ ಅಧಿಕಾರದ ಗದ್ದುಗೆಯನ್ನೇರಿದಾಗ ಶೇರು ಮಾರುಕಟ್ಟೆಯ ಗತಿಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಿದ್ದ ಹೂಡಿಕೆದಾರರು ನಿರಾಶೆಯಲ್ಲಿದ್ದಾರೆ. ಸರಕಾರದ ಮೊದಲ ಕೇವಲ 50 ದಿನಗಳಲ್ಲಿ ಹೂಡಿಕೆದಾರರು ಸುಮಾರು 12 ಲಕ್ಷ ಕೋಟಿ ರೂ.ಗಳ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದಲ್ಲಿ ವಹಿವಾಟಾಗುತ್ತಿರುವ ಶೇರುಗಳ ಮಾರುಕಟ್ಟೆ ಮೌಲ್ಯ ಈ ಅವಧಿಯಲ್ಲಿ 11.70 ಲ.ಕೋ.ರೂ.(ಶೇ.7.5)ಗಳ ಕುಸಿತವನ್ನು ಕಂಡಿದೆ. ಜೂ.3ರಂದು 156 ಲ.ಕೋ.ರೂ.ಗಳಿದ್ದ ಈ ಶೇರುಗಳ ಮಾರುಕಟ್ಟೆ ವೌಲ್ಯ ಈಗ 144 ಲ.ಕೋ.ರೂ.ಗಿಳಿದಿದೆ. ಮೋದಿ ಮೇ 30ರಂದು ಅಧಿಕಾರ ಸ್ವೀಕಾರ ಮಾಡಿದ್ದರು. ಆಗಿನಿಂದ ಬಿಎಸ್‌ಇಯಲ್ಲಿ ವಹಿವಾಟಾಗುತ್ತಿರುವ ಪ್ರತಿ 10 ಶೇರುಗಳ ಪೈಕಿ 9 (2,664ರ ಪೈಕಿ2,294) ಶೇರುಗಳು ಕುಸಿತದ ಹಾದಿಯಲ್ಲಿಯೇ ಇವೆ. ಶೇ.60ಕ್ಕೂ ಅಧಿಕ (1,632) ಶೇರುಗಳು ಶೇ.10ಕ್ಕೂ ಹೆಚ್ಚಿನ ಕುಸಿತವನ್ನು ದಾಖಲಿಸಿದ್ದರೆ, ಶೇ.33ರಷ್ಟು( 903) ಶೇರುಗಳು ಶೇ.20ಕ್ಕೂ ಅಧಿಕ ನಷ್ಟವನ್ನು ಅನುಭವಿಸಿವೆ.

  ತನ್ನ ವಿವೇಚನಾಯುತ ಹಣಕಾಸು ನೀತಿಯು ಅಚಲ ಎಂದು ಸರಕಾರವು ಈಗಾಗಲೇ ಸ್ಪಷ್ಟಪಡಿಸಿದ್ದರೆ,ಅತಿ ಶ್ರೀಮಂತರ ಮೇಲೆ ಸರ್ಚಾರ್ಜ್ ಹೇರುವ ಮತ್ತು ಸಾರ್ವಜನಿಕರು ಹೊಂದಿರುವ ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಶೇರುಗಳ ಕನಿಷ್ಠ ಮಿತಿಯನ್ನು ಶೇ.25ರಿಂದ ಶೇ.35ಕ್ಕೆ ಹೆಚ್ಚಿಸುವಂತಹ ಕೆಲವು ಮುಂಗಡಪತ್ರ ಪ್ರಸ್ತಾಪಗಳನ್ನು ಋಣಾತ್ಮಕ ಎಂದು ಹೂಡಿಕೆದಾರರು ಪರಿಗಣಿಸಿದ್ದಾರೆ.

ಈ ವರ್ಷ ಮೂರು ಲಕ್ಷ ಕೋಟಿ ಡಾ. ಮತ್ತು 2024ರ ವೇಳೆಗೆ ಐದು ಲಕ್ಷ ಕೋಟಿ ಡಾ.ಗಳನ್ನು ತಲುಪುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಆರ್ಥಿಕತೆಗೆ ನಿಧಾನ ಬೆಳವಣಿಗೆ ಇನ್ನೊಂದು ಸಮಸ್ಯೆಯಾಗಿ ಕಾಡುತ್ತಿದೆ.

2018ರಲ್ಲಿ ದೀರ್ಘಾವಧಿ ಬಂಡವಾಳ ಗಳಿಕೆ (ಎಲ್‌ಟಿಸಿಜಿ) ತೆರಿಗೆಯು ಮರು ಜಾರಿಗೊಂಡಾಗ ಮಾರುಕಟ್ಟೆಯು 10-12 ತಿಂಗಳು ನಿರಾಶಾದಾಯಕ ಪ್ರವೃತ್ತಿಯನ್ನು ಪ್ರದರ್ಶಿಸಿತ್ತು. ತೆರಿಗೆ ಹೇರಿಕೆಯು ಒಟ್ಟಾರೆ ಮಾರುಕಟ್ಟೆ ವೌಲ್ಯದ ಮೆಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಆದರೆ ಕಾಲ ಕಳೆದಂತೆ ಅದು ಸಹಜ ಸ್ಥಿತಿಗೆ ಮರಳುತ್ತದೆ ಎನ್ನುತ್ತಾರೆ ಸಾರ್ಥಿ ಗ್ರೂಪ್‌ನ ಪಾಲುದಾರ ಹಾಗೂ ಸಿಐಒ ಕುಂಜ್ ಬನ್ಸಾಲ್.

ವಿದೇಶಿ ಹೂಡಿಕೆದಾರ ಸಂಸ್ಥೆಗಳು ಈ ತಿಂಗಳಲ್ಲಿ ಈವರೆಗೆ 7,712 ಕೋ.ರೂ.ಮೌಲ್ಯದ ಶೇರುಗಳನ್ನು ಮಾರಾಟ ಮಾಡಿವೆ. ಮೇ ತಿಂಗಳಿನಲ್ಲಿ 7,919 ಕೋ.ರೂ.ಗಳನ್ನು ಮಾರುಕಟ್ಟೆಯಲ್ಲಿ ತೊಡಗಿಸಿದ್ದ ಅವು ಜೂನ್‌ನಲ್ಲಿ 2,595 ಕೋ.ರೂ.ಗಳ ಹೂಡಿಕೆ ಮಾಡಿದ್ದವು. ಮೋದಿ ಸರಕಾರದ ಎರಡನೇ ಅವಧಿಯಲ್ಲಿ ಸೆನ್ಸೆಕ್ಸ್ 1,800 ಅಂಶ (ಶೇ.4.4)ಗಳನ್ನು ಕಳೆದುಕೊಂಡು 38,100ರ ಮಟ್ಟದಲ್ಲಿದೆ.

ಬಡ್ಡಿ ಕಡಿತದ ಲಾಭಗಳ ವರ್ಗಾವಣೆಯ ಕೊರತೆ,ಕಾರ್ಪೊರೇಟ್ ಸಂಸ್ಥೆಗಳ ಬಂಡವಾಳ ವೆಚ್ಚ ಏರಿಕೆ,ಕ್ಷೀಣಿಸಿರುವ ಬಳಕೆದಾರರ ಬೇಡಿಕೆ ಇವೆಲ್ಲ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ. ಅಮೆರಿಕದ ಫೆಡರಲ್ ಬ್ಯಾಂಕ್‌ನ ಬಡ್ಡಿದರ ಕಡಿತ ಕುರಿತು ಅನಿಶ್ಚಿತೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಗಳು ಹೂಡಿಕೆದಾರರಲ್ಲಿ ಈಗಾಗಲೇ ಇರುವ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಸರಳವಾಗಿ ಹೇಳಬೇಕೆಂದರೆ ಸದ್ಯಕ್ಕೆ ಸಾಲಗಳಿಗೆ ಬೇಡಿಕೆಯಿಲ್ಲ. ಇದು ದುರದೃಷ್ಟಕರ. ಕೇಂದ್ರ ಸರಕಾರವು ಭಾರೀ ಬಹುಮತ ಹೊಂದಿರುವುದರಿಂದ ಹೆಚ್ಚಿನ ಸರಕಾರಿ ವೆಚ್ಚಗಳ ನಿರೀಕ್ಷೆಯಿತ್ತು,ಆದರೆ ಅದಿನ್ನೂ ಸಾಕಾರಗೊಂಡಿಲ್ಲ. ಈ ವರ್ಷ ಭಾರತೀಯ ಮಾರುಕಟ್ಟೆ ಖಂಡಿತವಾಗಿಯೂ ನಿಧಾನ ಗತಿಯಲ್ಲಿದೆ. ಚುನಾವಣೆಗಳ ನಂತರ ಉತ್ತಮ ಮಾರುಕಟ್ಟೆಯನ್ನು ನಿರೀಕ್ಷಿಸಿದ್ದ ಹೂಡಿಕೆದಾರರು ನಿರಾಶೆಗೊಂಡಿದ್ದಾರೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News